Wednesday, 6th November 2024

Delhi High Court: ಸತ್ತ ಮಗನ ವೀರ್ಯದಿಂದ ಮೊಮ್ಮಗು ಪಡೆಯಲು ವೃದ್ಧ ದಂಪತಿಯಿಂದ ನ್ಯಾಯಾಂಗ ಹೋರಾಟ; ಕೋರ್ಟ್‌ ಹೇಳಿದ್ದೇನು?

Delhi High Court

ಕ್ಯಾನ್ಸರ್‌ನಿಂದ (cancer) ಮೃತಪಟ್ಟ ಮಗನ ವೀರ್ಯದಿಂದ (sperm) ಮೊಮ್ಮಗುವನ್ನು ಪಡೆಯಲು ಮೂರು ವರ್ಷದ ಬಳಿಕ ದೆಹಲಿ ಹೈಕೋರ್ಟ್ (Delhi High Court) ಅನುಮತಿ ನೀಡಿದೆ. ಕಾನೂನಿನ ಪ್ರಕಾರ ಆಸ್ಪತ್ರೆ ಇದಕ್ಕೆ ಮೊದಲು ಅನುಮತಿ ನೀಡಲು ನಿರಾಕರಿಸಿದ್ದರಿಂದ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಿಸ್‌ ಕೌರ್‌ ಹಾಗೂ ಗುರುವಿಂದರ್ ಸಿಂಗ್‌ ದಂಪತಿ 2020ರಲ್ಲಿ ಕ್ಯಾನ್ಸರ್‌ನಿಂದ ತಮ್ಮ ಮಗನನ್ನು ಕಳೆದುಕೊಂಡರು. ಮಗನಿಗೆ ಕಿಮೋ ಚಿಕಿತ್ಸೆ ಪ್ರಾರಂಭಿಸುವ ಮುಂಚೆಯೇ ವೈದ್ಯರು ಆತನ ವೀರ್ಯಾಣು ಸಂಗ್ರಹಿಸಿಡಲು ಸಲಹೆ ನೀಡಿದ್ದರು. ಹೀಗಾಗಿ ದಂಪತಿ ಮಗನ ವೀರ್ಯಾಣುವನ್ನು ಲ್ಯಾಬ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದರು.

ಮಗನಿಗೆ ಏನಾಗಿತ್ತು?

ಮಿಸ್‌ ಕೌರ್‌ ಹಾಗೂ ಗುರುವಿಂದರ್ ಸಿಂಗ್‌ ದಂಪತಿಗೆ ಇಬ್ಬರು ಹೆಣ್ಣು ಮತ್ತು ಒಬ್ಬ ಗಂಡು ಮಗನಿದ್ದ. ಅತ್ಯಂತ ಸುಖಿ ಕುಟುಂಬಕ್ಕೆ 2020ರಲ್ಲಿ ದೊಡ್ಡ ಆಘಾತ ಉಂಟಾಗಿತ್ತು. 30 ವರ್ಷದ ಮಗ ಪ್ರೀತ್‌ ಇಂದ್ರ ಸಿಂಗ್‌ಗೆ ಲಿಂಪೋಮಾ ಬ್ಲಡ್‌ ಕ್ಯಾನ್ಸರ್ ಇದೆ ಎಂದು ತಿಳಿದಾಗ ದಂಪತಿ ಕುಸಿದು ಹೋದರು. ಕೀಮೋ ಪ್ರಾರಂಭಕ್ಕೂ ಮೊದಲು ಮಗನ ವೀರ್ಯ ಸಂಗ್ರಹಿಸಿಡಲು ದಂಪತಿಗೆ ಆಸ್ಪತ್ರೆಯವರು ಸಲಹೆ ನೀಡಿದರು. ಕ್ಯಾನ್ಸರ್ ರೋಗಿ ಯುವಕರ ವೀರ್ಯ ಮತ್ತು ಯುವತಿಯರ ಅಂಡಾಣು ಸಂಗ್ರಹಕ್ಕೆ ಸಲಹೆ ನೀಡಲಾಗುತ್ತದೆ. ಯಾಕೆಂದರೆ ವಿಕಿರಣ ಮತ್ತು ಕೀಮೋಥೆರಪಿಯಂತಹ ಕ್ಯಾನ್ಸರ್ ಚಿಕಿತ್ಸೆಯಿಂದ ವೀರ್ಯ ಎಣಿಕೆ ಮತ್ತು ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸಂಗ್ರಹಿಸಿಟ್ಟ ವೀರ್ಯ ಅಥವಾ ಅಂಡಾಣುವಿನಿಂದ ಮುಂದೆ ಅವರಿಗೆ ಮಗು ಬೇಕೆಂದೆನಿಸಿದಾಗ ತಂತ್ರಜ್ಞಾನದ ಸಹಾಯದಿಂದ ಮಗು ಪಡೆಯಲು ಇದು ಸಹಾಯವಾಗುತ್ತದೆ.

Delhi High Court

ಪ್ರೀತ್‌ ಇಂದ್ರ ಸಿಂಗ್‌ ವೀರ್ಯವನ್ನು 2020ರ ಜೂನ್ 27ರಂದು ಫ್ರೀಜ್ ಮಾಡಿ ಇಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೀತ್‌ ಸಿಂಗ್ ಸೆಪ್ಟೆಂಬರ್‌ನಲ್ಲಿ ಮೃತಪಟ್ಟಿದ್ದರು. ಇದಾಗಿ ಕೆಲವು ದಿನಗಳ ಬಳಿಕ ಆತನ ಪೋಷಕರು ಮಗನ ವೀರ್ಯದಿಂದ ಮೊಮ್ಮಗುವನ್ನು ಪಡೆಯಲು ಬಯಸಿ ಆಸ್ಪತ್ರೆಯನ್ನು ಸಂಪರ್ಕಿಸಿದರು. ಆದರೆ ಮಗ ಬದುಕಿರದ ಕಾರಣ ಕಾನೂನು ಪ್ರಕಾರವಾಗಿ ನೀವು ಮಗುವನ್ನು ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ನೊಂದ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಾಲಯ ಹೇಳಿದ್ದೇನು?

ಅರ್ಜಿದಾರರು ಮೊಮ್ಮಗನನ್ನು ಬೆಳೆಸುವ ಬಯಕೆಯನ್ನು ನ್ಯಾಯಾಲಯದ ಮುಂದಿರಿಸಿದರು. ಒಂದು ವೇಳೆ ನಮಗೇನಾದರೂ ಆದರೆ ತಮ್ಮಿಬ್ಬರು ಹೆಣ್ಣು ಮಕ್ಕಳು ಆ ಮಗುವಿನ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ ತಮಗೆ ತಮ್ಮ ಮಗನ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಪಡೆಯಲು ಅವಕಾಶ ನೀಡುವಂತೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಈ ಕುರಿತು ಸುದೀರ್ಘ ವಿಚಾರಣೆಯ ಬಳಿಕ ದೆಹಲಿ ಹೈಕೋರ್ಟ್ ಇಸ್ರೇಲ್‌ನಲ್ಲಿನ ಪ್ರಕರಣವನ್ನು ಉಲ್ಲೇಖಿಸಿದೆ. ಯುದ್ಧದಲ್ಲಿ ಸಾವನ್ನಪ್ಪಿದ 19 ವರ್ಷದ ಸೈನಿಕನ ಪೋಷಕರು ತಮ್ಮ ಮಗನ ವೀರ್ಯದಿಂದ ಮೊಮ್ಮಗಳನ್ನು ಪಡೆದಿರುವುದಾಗಿ ಹೇಳಿ ವೀರ್ಯ ಅವರ ಮಗನ “ಆಸ್ತಿ” ಎಂದು ಪರಿಗಣಿಸಿರುವುದಾಗಿ ತಿಳಿಸಿದೆ. ಹೀಗಾಗಿ ಮೃತರ ಪೋಷಕರು ತಮ್ಮ ಮಗನ ವೀರ್ಯದಿಂದ ಮೊಮ್ಮಗುವನ್ನು ಪಡೆಯಲು ಹಿಂದೂ ಉತ್ತರಾಧಿಕಾರ ಕಾಯಿದೆಯಡಿಯಲ್ಲಿ ಅರ್ಹರಾಗಿರುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.

Hardeep Singh Nijjar: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಕೊಡಿ; ಕೆನಡಾಕ್ಕೆ ಭಾರತ ಟಾಂಗ್‌

ಮಗುವಿನ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಸಹೋದರನ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆತನ ಇಬ್ಬರು ಸಹೋದರಿಯರು ವಹಿಸಿಕೊಳ್ಳಲು ಒಪ್ಪಿಕೊಂಡಿರುವುದರಿಂದ ಅವರಿಗೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಅನುಮತಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.