Friday, 22nd November 2024

Delhi horror: ಕೊಟ್ಟ ಸಾಲ ಮರಳಿ ಕೇಳಿದ್ದೇ ತಪ್ಪಾಯ್ತು: ಅಪ್ರಾಪ್ತರಿಂದ ಗುಂಡಿನ ದಾಳಿ; ಓರ್ವ ಸಾವು

Delhi horror

ದೆಹಲಿ: ಈಶಾನ್ಯ ದಿಲ್ಲಿಯ (Delhi horror) ಕಬೀರ್ ನಗರ ಪ್ರದೇಶದಲ್ಲಿ ಶುಕ್ರವಾರ (ನ. 8) ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ (Shootout) ಓರ್ವ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ರಾತ್ರಿ ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಮೂವರು ಸ್ನೇಹಿತರ ಮೇಲೆ ಬೈಕ್‌ ಮೇಲೆ  ಬಂದ ಮೂವರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವನ್ನು ನದೀಮ್‌ ಎಂದು ಗುರುತಿಸಲಾಗಿದೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮೃತ ನದೀಮ್‌ ಹಾಗೂ ಆತನ ಇಬ್ಬರು ಸ್ನೇಹಿತರು ಬೀದಿ ಬದಿಯ ಅಂಗಡಿಯಲ್ಲಿ ಆಹಾರ ತೆಗೆದುಕೊಳ್ಳುವಾಗ ಹೊಂಚು ಹಾಕಿ ಕುಳಿತಿದ್ದ ದಾಳಿಕೋರರು ತಕ್ಷಣ ಮೂವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನದೀಮ್‌ ಮೇಲೆ ಏಳು ಸುತ್ತು ಗುಂಡು ಹಾರಿಸಲಾಗಿದೆ. ಆತ ಸ್ಥಳದಲ್ಲಿಯೇ ಮೃತ ಪಟ್ಟರೆ ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ದಿಲ್ಲಿಯ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳು ದಾಳಿ ನಡೆಸಿದ ನಂತರ ತಮ್ಮ ಬೈಕ್‌ನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ತಕ್ಷಣವೇ ತನಿಖೆ ಪ್ರಾರಂಭಿಸಿದ ದಿಲ್ಲಿ ಪೋಲಿಸರು ಮೂವರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ, ಬಂಧಿತ ಮೂವರು ಅಪ್ರಾಪ್ತರಲ್ಲಿ ಒಬ್ಬ ನದೀಮ್‌ನಿಂದ ಸಾಲ ಪಡೆದಿದ್ದ. ಸಾಲ ಮರುಪಾವತಿ ಮಾಡುವಂತೆ ನದೀಮ್‌ ಹಲವು ಬಾರಿ ಕೇಳಿದ್ದ. ಅದಕ್ಕಾಗಿಯೇ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ದಿಲ್ಲಿಯ ಜ್ಯೋತಿ ನಗರದಲ್ಲಿ ನಡೆದ ಗುಂಡಿನ ದಾಳಿಯಲ್ಲೂ ಬಂಧಿತ ಅಪ್ರಾಪ್ತ ಆರೋಪಿಗಳು ಭಾಗವಹಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ರಾಹುಲ್ ಎಂಬುವವರ ಮನೆಯ ಹೊರಗೆ ಆರೋಪಿಗಳು ಆರು ಸುತ್ತು ಗುಂಡು ಹಾರಿಸಿದ್ದರು ಎಂಬುದು ತಿಳಿದು ಬಂದಿದೆ. ಬಂಧಿತರಿಂದ ಮೂರು ಕಂಟ್ರಿ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಬಾಲಾಪರಾಧಿಗಳ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ: School Principal Shot Dead: ನಡುರಸ್ತೆಯಲ್ಲೇ ಪ್ರಿನ್ಸಿಪಾಲ್ ಮೇಲೆ ಗುಂಡಿನ ದಾಳಿ; ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ಕೃತ್ಯ

ಪ್ರತ್ಯೇಕ ಕಾರ್ಯಾಚರಣೆಯಲ್ಲಿ, ದಿಲ್ಲಿ ಪೊಲೀಸರ ಅಪರಾಧ ವಿಭಾಗವು ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದೆ. ಬಂಧಿತರಿಂದ 13 ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದೆ. ಮುಖ್ಯ ಶಸ್ತ್ರಾಸ್ತ್ರ ಪೂರೈಕೆದಾರ ಶಕೀಲ್, ಜಹಾಂಗೀರ್ಪುರಿಯಲ್ಲಿ ನಡೆದ ಹನುಮ ಜಯಂತಿ ಗಲಭೆಯಲ್ಲಿ ಭಾಗಿಯಾಗಿರುವುದು ಸೇರಿದಂತೆ 17 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾದ ಆರೋಪಿಯಾಗಿದ್ದಾನೆ. ಇತ್ತೀಚೆಗೆ ದೇಶದಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಇತ್ತೀಚೆಗೆ ಪಂಜಾಬ್‌ ಪೊಲೀಸರು ಹಲವರನ್ನು ಬಂಧಿಸಿದ್ದರು.