ರಾಷ್ಟ್ರಪತಿ ರಾಮನಾಥ ಕೋವಿಂದ್ ಅಂಕಿತ ಹಾಕಿದ ಬಳಿಕ ಕೇಂದ್ರ ಸರ್ಕಾರ ಮೂರು ಮಹಾನಗರ ಪಾಲಿಕೆಗಳ ವಿಲೀನದ ಕುರಿತು ಅಧಿಸೂಚನೆ ಪ್ರಕಟಿಸಿದೆ. ದೆಹಲಿಯ ಪೂರ್ವ, ದಕ್ಷಿಣ ಮತ್ತು ಉತ್ತರ ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸಲಾಗುತ್ತದೆ. ಒಬ್ಬರೇ ಮೇಯರ್ ಇರಲಿದ್ದಾರೆ.
ಪಾಲಿಕೆ ವಿಲೀನದ ಬಳಿಕ ಮುನ್ಸಿಪಲ್ ಕಾರ್ಪೊರೇಷನ್ ದೆಹಲಿ ಎಂಬ ಒಂದೇ ಸಂಸ್ಥೆ ಅಸ್ತಿತ್ವದಲ್ಲಿ ಇರಲಿದೆ. ಇದರ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ಅಧಿಕಾರಿಯನ್ನು ನೇಮಕ ಮಾಡಲಿದೆ. ಅಧಿಸೂಚನೆ ಪ್ರಕಟಗೊಂಡ ದಿನದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಕಾನೂನು ಸಚಿವಾಲಯ ಹೇಳಿದೆ.
ಪಾಲಿಕೆಗಳ ವಿಲೀನದ ಬಳಿಕ ಮುನ್ಸಿಪಲ್ ಕಾರ್ಪೊರೇಷನ್ ದೆಹಲಿ ಒಂದೇ ಉಳಿಯಲಿದೆ. ಮೂರು ಮಹಾನಗರ ಪಾಲಿಕೆಯಿಂದಾಗಿ ದೆಹಲಿಯಲ್ಲಿ 272 ವಾರ್ಡ್‌ಗಳಿದ್ದವು. ಉತ್ತರ ಮತ್ತು ದಕ್ಷಿಣ ಪಾಲಿಕೆ ತಲಾ 104 ವಾರ್ಡ್‌ಗಳನ್ನು ಹೊಂದಿದ್ದವು. ಪೂರ್ವ ಪಾಲಿಕೆಯಲ್ಲಿ 64 ವಾರ್ಡ್‌ಗಳಿತ್ತು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೂರು ಮಹಾನಗರ ಪಾಲಿಕೆಗಳ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ದೆಹಲಿ ಮಹಾನಗರ ಪಾಲಿಕೆ ಚುನಾವಣೆಗಳನ್ನು ವಿಳಂಬಗೊಳಿಸುವ ಉದ್ದೇಶದಿಂದ ಈಗ ಪಾಲಿಕೆ ವಿಲೀನ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದರು.