ನವದೆಹಲಿ: ಕಾನೂನು ಬದ್ಧ ಮದ್ಯಪಾನ ವಯಸ್ಸನ್ನ 25 ವರ್ಷದಿಂದ 21 ವರ್ಷಕ್ಕೆ ಇಳಿಸಲಾಗಿದೆ ಎಂದು ದೆಹಲಿ ಉಪಮುಖ್ಯ ಮಂತ್ರಿ ಮನೀಶ್ ಸಿಸೋಡಿಯಾ ಸೋಮವಾರ ಘೋಷಿಸಿದ್ದಾರೆ.
ಸಚಿವ ಸಂಪುಟ ಅನುಮೋದಿಸಿದ ಹೊಸ ಅಬಕಾರಿ ನೀತಿಯ ಪ್ರಕಾರ, ದೆಹಲಿಯಲ್ಲಿ ಯಾವುದೇ ಹೊಸ ಮದ್ಯದಂಗಡಿಗಳನ್ನ ತೆರೆಯಲಾಗುವುದಿಲ್ಲ ಮತ್ತು ಸರ್ಕಾರ ಯಾವುದೇ ಮದ್ಯ ಮಾರಾಟ ನಡೆಸುವುದಿಲ್ಲ. ಸಚಿವರ ಗುಂಪಿನ ಶಿಫಾರಸುಗಳ ಆಧಾರದ ಮೇಲೆ ನೂತನ ಅಬಕಾರಿ ನೀತಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ದೆಹಲಿಯಲ್ಲಿ ಕುಡಿಯಬೇಕಾದ ಕಾನೂನು ಬದ್ಧ ವಯಸ್ಸು 21ಕ್ಕೆ ಇಳಿಸಲಾಗಿದೆ. ಪ್ರಸ್ತುತ ದೆಹಲಿಯಲ್ಲಿ ಶೇ.60ರಷ್ಟು ಮದ್ಯ ದಂಗಡಿಗಳು ಸರಕಾರದಿಂದ ನಡೆಸಲ್ಪಡುತ್ತವೆ ಎಂದು ಸಿಸೋಡಿಯಾ ಹೇಳಿದರು.
ದೆಹಲಿಯ ನೂತನ ಅಬಕಾರಿ ನೀತಿಯನ್ನ ಪ್ರಕಟಿಸಿದ ಅವರು, ‘ಮದ್ಯ ಮಾಫಿಯಾವನ್ನು ವ್ಯಾಪಾರದಿಂದ ಹೊರ ಹಾಕುವ ಉದ್ದೇಶದಿಂದ ಸರಕಾರ ಮದ್ಯ ಮಾರಾಟ ಮಳಿಗೆಗಳಿಗೆ ನ್ಯಾಯೋಚಿತವಾಗಿ ವಿತರಣೆ ಮಾಡಬೇಕು. ಅಬಕಾರಿ ಇಲಾಖೆಯಲ್ಲಿ ಸುಧಾರಣೆಯಾದ ನಂತರ ಶೇ.20ರಷ್ಟು ಆದಾಯ ವೃದ್ಧಿಯ ಅಂದಾಜು ಮಾಡಲಾಗಿದೆ’ ಎಂದು ಹೇಳಿದರು.
ದೆಹಲಿಯಲ್ಲಿ 500 ಚದರ ಅಡಿ ಜಾಗದಲ್ಲಿ ಮದ್ಯದಂಗಡಿಗಳನ್ನು ಸ್ಥಾಪಿಸಿದರೆ ಮಾತ್ರ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗುವುದು. 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಿಗೂ ಮದ್ಯಕ್ಕಾಗಿ ಬಾರ್ ಮತ್ತು ರೆಸ್ಟೋರೆಂಟ್ʼಗಳಿಗೆ ಪ್ರವೇಶ ವಿರುವುದಿಲ್ಲ. ಮದ್ಯದ ಗುಣಮಟ್ಟವು ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿರಬೇಕು. ದೆಹಲಿಯಲ್ಲಿ ತನ್ನದೇ ಆದ ಮಾನದಂಡ ಇರುತ್ತದೆ. ಅಂಗಡಿಯ ಮಾಲೀಕರು ಅಂಗಡಿಯ ಆವರಣದಲ್ಲಿ ಶಿಸ್ತು ಮತ್ತು ಸಭ್ಯತೆ ಕಾಪಾಡಿಕೊಳ್ಳಬೇಕು.