Sunday, 6th October 2024

Delhi Shootout: ವೈದ್ಯನ ಶೂಟೌಟ್‌ ಬಳಿಕ ಪಿಸ್ತೂಲ್‌ ಜತೆಗೇ ಇನ್‌ಸ್ಟಾಗ್ರಾಂನಲ್ಲಿ ಪೋಸ್‌ ಕೊಟ್ಟ ಹಂತಕ; ಹತ್ಯೆಗೆ ಕಾರಣ ಏನ್‌ ಗೊತ್ತಾ?

Delhi shootout

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಯೊಂದರಲ್ಲಿ ವೈದ್ಯನ ಶೂಟೌಟ್‌(Delhi Shootout) ಪ್ರಕರಣಕ್ಕೆ ಸಂಬಂಧಿಸಿದಂತೆ 17 ವರ್ಷದ ಯುವಕನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ವೈದ್ಯನ ಹತ್ಯೆ ಬಳಿಕ ಯುವಕನ ಪಿಸ್ತೂಲ್‌ ಸಮೇತ ಫೊಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದ ಎನ್ನಲಾಗಿದೆ.

ಜೈತ್‌ಪುರ ಪ್ರದೇಶದ ಕಾಳಿಂದಿ ಕುಂಜ್‌ನಲ್ಲಿರುವ ನಿಮಾ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಯುವಕ ತನ್ನ ಸ್ನೇಹಿತನ ಜತೆ ಆಸ್ಪತ್ರೆಗೆ ಬಂದಿದ್ದ. ಚಿಕಿತ್ಸೆ ಪಡೆದ ನಂತರ ಏಕಾಏಕಿ ವೈದ್ಯ ಜಾವೇದ್‌ ಅಖ್ತಾರ್‌ನ ಕೊಠಡಿಗೆ ನುಗ್ಗಿದ ಈ ಇಬ್ಬರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವೈದ್ಯ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರು.

ಆಸ್ಪತ್ರೆಯ ಸಿಬ್ಬಂದಿ ಪ್ರಕಾರ, ಇಬ್ಬರು ವ್ಯಕ್ತಿಗಳು ಗಾಯಗೊಂಡು ಆಸ್ಪತ್ರೆಗೆ ಬಂದಿದ್ದರು, ಅವರು ಡ್ರೆಸ್ಸಿಂಗ್ ನಂತರ ವೈದ್ಯರನ್ನು ಭೇಟಿಯಾಗಲು ಒತ್ತಾಯಿಸಿದರು ಮತ್ತು ಅವರ ಕ್ಯಾಬಿನ್‌ಗೆ ಪ್ರವೇಶಿಸುತ್ತಿದ್ದಂತೆ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ಸದ್ದು ಕೇಳಿದ ಕೂಡಲೇ ವೈದ್ಯರ ಕ್ಯಾಬಿನ್‌ಗೆ ಧಾವಿಸಿ ನೋಡಿದಾಗ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿತು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಇನ್‌ಸ್ಟಾದಲ್ಲಿ ಪೋಸ್ಟ್‌

ವೈದ್ಯನ ಹತ್ಯೆ ಬಳಿಕ ಆರೋಪಿ ಯುವಕ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾನೆ. ಅದರಲ್ಲಿ ಕೈಯಲ್ಲಿ ಬಂದೂಕು ಹಿಡಿದು ಪೋಸ್‌ ಕೊಟ್ಟಿರುವ ಈತ ಕರ್‌ ದಿಯಾ 2024ಮೇ ಮರ್ಡನ್‌( 2024 ಮರ್ಡರ್‌ ಮಾಡಿದೆ) ಎಂದು ಬರೆದುಕೊಂಡಿದ್ದಾನೆ. ಈ ಪೋಸ್ಟ್‌ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಹತ್ಯೆಗೆ ಕಾರಣ ಏನು?

ಪ್ರಾಥಮಿಕ ತನಿಖೆಗೆಯಲ್ಲಿ ವೈದ್ಯನ ಹತ್ಯೆಗೆ ಕಾರಣ ಏನೆಂಬುದು ತಿಳಿದಿರಲಿಲ್ಲ. ಇದೀಗ ಆರೋಪಿ ಅರೆಸ್ಟ್‌ ಆಗುತ್ತಿದ್ದಂತೆ ಡಾ.ಜಾವೆದ್‌ ಅಖ್ತಾರ್‌ ಹತ್ಯೆಗೆ ಕಾರಣ ಏನೆಂಬುದು ಬಯಲಾಗಿದೆ. ವೈದ್ಯ ಚಿಕಿತ್ಸೆಗೆ ಹೆಚ್ಚು ಹಣ ತೆಗೆದುಕೊಂಡಿದ್ದಾನೆ ಎಂಬ ಕೋಪದಿಂದ ಈ ಕೃತ್ಯ ಎಸಗಿರುವುದಾಗಿ ಯುವಕ ಬಾಯ್ಬಿಟ್ಟಿದ್ದಾರೆ. ಇದೀಗ ಪೊಲೀಸರು ಆತನ ಸಹಚರನನ್ನೂ ಅರೆಸ್ಟ್‌ ಮಾಡಿ ತನಿಖೆ ನಡೆಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಜಿಮ್‌ ಮಾಲೀಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ವರದಿಯಾಗಿತ್ತು. ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ 35 ವರ್ಷದ ಜಿಮ್ ಮಾಲೀಕನನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೀಕರ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಫ್ಘಾನಿಸ್ತಾನ ಮೂಲದ ಮತ್ತು ಸಿಆರ್ ಪಾರ್ಕ್‌ನಲ್ಲಿ ನೆಲೆಸಿದ್ದ ನಾದಿರ್ ಶಾ ಎಂಬಾತ ಮೃತ ದುರ್ದೈವಿಯಾಗಿದ್ದು, ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಆತ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ರಾತ್ರಿ 10:45 ರ ಸುಮಾರಿಗೆ ಗುಂಡಿನ ದಾಳಿಯ ಬಗ್ಗೆ ಪೊಲೀಸರಿಗೆ ಕರೆ ಬಂದಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ರಕ್ತದಮಡುವಿನಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಶಾನನ್ನು ಪೊಲೀಸರು ಕಂಡಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಗೆ ತಲುಪುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Delhi Shootout: ರಾತ್ರೋರಾತ್ರಿ ಶೂಟೌಟ್‌; ಆಫ್ಘನ್‌ ಮೂಲದ ಜಿಮ್‌ ಓನರ್‌ ಬಲಿ- ಬಿಷ್ಣೋಯ್‌ ಗ್ಯಾಂಗ್‌ನಿಂದ ಕೃತ್ಯ