Sunday, 24th November 2024

ದೇಶದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬೇಡಿಕೆ, ವಿದೇಶಕ್ಕೆ ತೆರಳುವ ಅಗತ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ

ವದೆಹಲಿ: ದೇಶಾದ್ಯಂತ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, 11ನೇ ಬಾರಿಗೆ ಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜಾ ರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಮತ್ತು ಹೋರಾಡಿದ ಅಸಂಖ್ಯಾತ ಜನರಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ.

ವಿಕಸಿತ ಭಾರತ 140 ಕೋಟಿ ಜನರ ಸಂಕಲ್ಪ ಮತ್ತು ಕನಸುಗಳ ಪ್ರತಿಬಿಂಬವಾಗಿದೆ. ‘ನಮ್ಮ ಸಂಕಲ್ಪ’ದೊಂದಿಗೆ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಜನರು ಸಮರ್ಥರಾಗಿದ್ದಾರೆ ಎಂದು ತಿಳಿಸಿದರು.

ಇನ್ನು ವೈದ್ಯಕೀಯ ಕ್ಷೇತ್ರಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ವೈದ್ಯರಾಗುವ ಕನಸು ಹೊತ್ತು ವೃತ್ತಿಪರ ಕೋರ್ಸ್​ಗಳಿಗಾಗಿ ಭಾರತ ಬಿಟ್ಟು ವಿದೇಶಕ್ಕೆ ಹಾರುವ ಅಭ್ಯರ್ಥಿಗಳು ಹೆಚ್ಚಾಗಿದ್ದಾರೆ. ಈ ವಿಷಯವನ್ನು ಉಲ್ಲೇಖಿಸಿದ ಪ್ರಧಾನಿ, ‘ಮೆಡಿಕಲ್​ ವೃತ್ತಿಪರರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ 75,000 ಹೊಸ ಸೀಟುಗಳನ್ನು ಹೆಚ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

‘ಕಳೆದ ದಶಕದಲ್ಲಿ ತಮ್ಮ ಸರ್ಕಾರವು ಲಭ್ಯವಿರುವ ಒಟ್ಟು ಸೀಟುಗಳನ್ನು ಸುಮಾರು ಒಂದು ಲಕ್ಷಕ್ಕೆ ಹೆಚ್ಚಿಸಿದೆ. ಈಗ 75,000 ಹೆಚ್ಚು ಸೀಟುಗಳನ್ನು ಸೇರಿಸುವುದರಿಂದ ಪರೀಕ್ಷೆಗೆ ತಯಾರಿ ನಡೆಸಲು ಸಾಕಷ್ಟು ಹಣವನ್ನು ವ್ಯಯಿಸುವ ಲಕ್ಷಾಂತರ ಅಭ್ಯರ್ಥಿಗಳ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಇತರೆ ದೇಶಗಳಿಗೆ ಹೋಗುವುದು ಕೂಡ ತಪ್ಪುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.