Sunday, 15th December 2024

ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದವರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ: ನಡ್ಡಾ

ನವದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು, ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದ ಎಲ್ಲ ಮಿತಿಗಳನ್ನು ಮೀರಿದ್ದಾರೆ ಮತ್ತು ಅವರನ್ನು ಪ್ರಜಾಪ್ರಭುತ್ವ ರಾಷ್ಟ್ರದಿಂದ ಗಂಟುಮೂಟೆ ಕಟ್ಟಿಸಿ ದೂರಕ್ಕೆ ಕಳುಹಿಸಬೇಕು ಎಂದು ಹೇಳಿದರು.

‘ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದವರಿಗೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ’ ಎಂದು ನಡ್ಡಾ ಅವರು ಚೆನ್ನೈನಲ್ಲಿ ನಡೆಯುತ್ತಿರುವ ತಮ್ಮ ಪಕ್ಷದ ಭಾರತೀಯ ಜನತಾ ಯುವ ಮೋರ್ಚಾದ ‘ರಾಷ್ಟ್ರೀಯ ಯುವ ಸಂಸತ್’ ಅನ್ನು ಉದ್ಘಾಟಿಸಿದ ನಂತರ ತಮ್ಮ ಭಾಷಣದಲ್ಲಿ ಹೇಳಿದರು.

‘ಕಾಂಗ್ರೆಸ್ ಮಾನಸಿಕವಾಗಿ ದಿವಾಳಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಹೇಳುವ ಮೂಲಕ ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಯುಎಸ್ ಮತ್ತು ಯುರೋಪಿಯನ್ ರಾಷ್ಟ್ರಗಳಂತಹ ವಿದೇಶಿ ಶಕ್ತಿಗಳನ್ನು ‘ಪ್ರಚೋದನೆ’ ಮಾಡಿದ್ದಾರೆ’ ಎಂದು ನಡ್ಡಾ ಆರೋಪಿಸಿದರು. ರಾಹುಲ್ ಗಾಂಧಿ ಅವರು ಪ್ರಜಾಪ್ರಭುತ್ವದ ಎಲ್ಲ ಗಡಿಗಳನ್ನು ದಾಟಿದ್ದಾರೆ.

ಅವರು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ ಎಂದರೆ, ಭಾರತದ ಜನರು ಅವರ ಮಾತನ್ನು ಕೇಳುವುದಿಲ್ಲ. ಆದರೆ, ಅವರನ್ನು ಸಹಿಸಿ ಕೊಳ್ಳುತ್ತಾರೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ ನಾಚಿಕೆಗೇಡಿನ ಹೇಳಿಕೆಗಳ ಮೂಲಕ ಕೇವಲ ರಾಷ್ಟ್ರವನ್ನು ಅವಮಾನಿಸಿಲ್ಲ. ಬದಲಿಗೆ, ನಮ್ಮ ದೇಶದಲ್ಲಿ ಮಧ್ಯಪ್ರವೇಶಿಸುವಂತೆ ವಿದೇಶಿ ರಾಷ್ಟ್ರಗಳನ್ನು ಆಹ್ವಾನಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.

ಬ್ರಿಟನ್ನಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಗೆ ಸಂಸತ್ತಿನಲ್ಲಿ ಕ್ಷಮೆಯಾಚಿಸಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟುಹಿಡಿದಿದ್ದರೆ, ಕಾಂಗ್ರೆಸ್, ಬಿಜೆಪಿಯ ಆರೋಪವನ್ನು ತಿರಸ್ಕರಿಸಿದೆ. ಅದಾನಿ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ತನ್ನ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸು ತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಮಾರ್ಚ್ 13 ರಂದು ಆರಂಭವಾದ ಸಂಸತ್ತಿನ ಬಜೆಟ್ ಅಧಿವೇಶನವು ಇದೇ ವಿಚಾರವಾಗಿ ಮುಂದೂಡುತ್ತಲೇ ಬಂದಿದೆ.