ನವದೆಹಲಿ: ಎಮರಾಲ್ಡ್ ಕೋರ್ಟ್ ಆವರಣದಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಮೇರೆಗೆ, ಸುಮಾರು 100 ಮೀಟರ್ ಎತ್ತರದ ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸೆಯಾನೆಗಳನ್ನು ಭಾನುವಾರ ಮಧ್ಯಾಹ್ನ ಸ್ಫೋಟಕಗಳನ್ನು ಬಳಸಿ ನೆಲಕ್ಕುರುಳಿಸಲಾಗಿತ್ತು.
ನೋಯ್ಡಾದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಿದ ಕಾರಣ ರಿಯಾಲ್ಟಿ ಸಂಸ್ಥೆಯಾದ ಸೂಪರ್‌ಟೆಕ್ ಲಿಮಿಟೆಡ್‌ಗೆ ನಿರ್ಮಾಣ ಮತ್ತು ಬಡ್ಡಿ ವೆಚ್ಚ ಸೇರಿದಂತೆ 500 ಕೋಟಿ ರೂಪಾಯಿ ನಷ್ಟ ವಾಗಿದೆ ಎಂದು ಕಂಪನಿಯ ಅಧ್ಯಕ್ಷ ಆರ್.ಕೆ.ಅರೋರಾ ಭಾನುವಾರ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ 3,700 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸ ಲಾಗಿದೆ. ಈ ಕಟ್ಟಡ ಕೆಡವಿದ ವೆಚ್ಚವೇ ಸುಮಾರು 20 ಕೋಟಿ ಎಂದು ಅಂದಾಜಿಸಲಾಗಿದೆ.
ಅವಳಿ ಗೋಪುರಗಳು ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿನ ಸೆಕ್ಟರ್ 93 A ನಲ್ಲಿ ಸೂಪರ್‌ಟೆಕ್‌ನ ಎಮರಾಲ್ಡ್ ಕೋರ್ಟ್ ಯೋಜನೆಯ ಭಾಗವಾಗಿತ್ತು. ಎರಡು ಟವರ್‌ಗಳಲ್ಲಿರುವ 900ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ನಾವು ಈ ಗೋಪುರಗಳನ್ನು ನೋಯ್ಡಾ ಅಭಿವೃದ್ಧಿ ಪ್ರಾಧಿಕಾರವು ಅನುಮೋದಿಸಿದ ಕಟ್ಟಡದ ಯೋಜನೆಯ ಪ್ರಕಾರ ನಿರ್ಮಿಸಿದ್ದೇವೆ’ ಎಂದು ಅವರು ಹೇಳಿದರು.