ಕರ್ನೂಲ್: ನವರಾತ್ರಿ ಹಬ್ಬದಂದು ನಡೆಯುವ ದೇವರಗಟ್ಟು ಬನ್ನಿ ಉತ್ಸವದ ದಂಡ ಕಾಳಗದಲ್ಲಿ ಮೂವರು ಮೃತಪಟ್ಟಿದ್ದು, ನೂರಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಈ ಮೆರವಣಿಗೆಯಲ್ಲಿ ಉತ್ಸವ ಮೂರ್ತಿಯನ್ನು ಕೊಂಡೊಯ್ಯುವಾಗ ದಂಡ ಕಾಳಗ ನಡೆಸಿಕೊಂಡು ಬರಲಾಗುತ್ತಿದೆ. ಈ ವೇಳೆ, ಮೆರವಣಿಯಲ್ಲಿ ಪಾಲ್ಗೊಳ್ಳುವ ನೂರಾರು ಜನರು ದಂಡ ಕಾಳಗದಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಮೂವರು ಸಾವನ್ನಪ್ಪಿದ್ದು, ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ರಾತ್ರಿ ಮಲ್ಲಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಮದುವೆ ಸಮಾರಂಭ ನಡೆಯಿತು. ಬಳಿಕ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಾದ ಗುಡ್ಡ, ಪಡಿಯಗಟ್ಟು, ರಕ್ಷಪದ, ಸಮೀವೃಕ್ಷಂ, ನಖಿಬಸವಣ್ಣಗುಡಿ ಸೇರಿ ವಿವಿದೆಡೆ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು. ಈ ವೇಳೆ, ಆರು ಗ್ರಾಮದ ಜನರು ಸೇರಿ ಒಂದು ಗುಂಪು ಮತ್ತು ಮೂರು ಗ್ರಾಮದ ಜನರು ಸೇರಿ ಮತ್ತೊಂದು ಗುಂಪು ಮಾಡಿ ಉತ್ಸವ ಮೂರ್ತಿ ಎದುರು ದಂಡ ಕಾಳಗ ನಡೆಸಿದರು. ಬನ್ನಿ ಉತ್ಸವ ಎಂದು ಕರೆಯಲಾಗುತ್ತದೆ.
ಬನ್ನಿ ಉತ್ಸವದಲ್ಲಿ ದಂಡ ಕಾಳಗದ ವೇಳೆ ಉಂಟಾಗುವ ಹಿಂಸಾಚಾರವನ್ನು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಗ್ರಾಮದ ವಿವಿದೆಡೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿತ್ತು.