Thursday, 5th December 2024

Devendra Fadnavis: ಹ್ಯಾಟ್ರಿಕ್‌ ಸಿಎಂ ಫಡ್ನವೀಸ್ ಹಿನ್ನೆಲೆ ಏನು? ಅವರ ಮುಂದಿರುವ ಸವಾಲುಗಳೇನು?

Devendra Fadnavis

ಮುಂಬೈ: ಮೂರನೇ ಬಾರಿಗೆ ದೇವೇಂದ್ರ ಫಡ್ನವಿಸ್ (Devendra Fadnavis) ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ (Maharashtra Chief Minister) ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದ್ದು, ಈ ಕುರಿತು ಬಿಜೆಪಿ ಕೋರ್ ಕಮಿಟಿ (BJP core committee) ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಮಹಾರಾಷ್ಟ್ರದ ರಾಜಕೀಯದಲ್ಲಿ ಗಮನಾರ್ಹವಾಗಿ ಬೆಳವಣಿಗೆ ಕಾಣುತ್ತಿರುವ ದೇವೇಂದ್ರ ಫಡ್ನವಿಸ್ ಯಾರು? ಮಹಾರಾಷ್ಟ್ರದ ರಾಜಕೀಯದಲ್ಲಿ ಅವರ ಹೆಜ್ಜೆಗಳು ಹೇಗಿತ್ತು ಗೊತ್ತೇ?

ನಾಗ್ಪುರದವರಾದ ಫಡ್ನವೀಸ್ ಮೂರನೇ ಬಾರಿಗೆ ಭಾರತದ ಶ್ರೀಮಂತ ರಾಜ್ಯದ ಆಡಳಿತವನ್ನು ಕೈಗೆತ್ತಿಕೊಳ್ಳಲು ಸಿದ್ದರಾಗಿದ್ದಾರೆ. ‘ದೇವ ಭಾವು’ ಎಂದು ಜನಪ್ರಿಯವಾಗಿರುವ ಫಡ್ನವಿಸ್ ಅವರು ಮಹಾರಾಷ್ಟ್ರದ ಮೂಲಸೌಕರ್ಯ ಮತ್ತು ಆಡಳಿತಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಕಾರ್ಪೊರೇಟರ್ ಸ್ಥಾನದಿಂದ ಮುಖ್ಯಮಂತ್ರಿ ವರೆಗೆ

  • 22 ನೇ ವಯಸ್ಸಿನಲ್ಲಿ ಫಡ್ನವೀಸ್ ನಾಗ್ಪುರದಲ್ಲಿ ಕಾರ್ಪೊರೇಟರ್ ಆಗಿ ರಾಜಕೀಯಕ್ಕೆ ಪ್ರವೇಶ ಪಡೆದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು, ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದರು. ರಾಜ್ಯ ರಾಜಕೀಯದಲ್ಲಿದ್ದ ಜಗಳಗಳ ಕಾರಣದಿಂದ ಶೀಘ್ರವಾಗಿ ಹೆಸರುಗಳಿಸಿದರು. ಅವರ ತೀಕ್ಷ್ಣವಾದ ಬುದ್ದಿ ಶಕ್ತಿ ಮತ್ತು ಅಸಾಧಾರಣ ಚರ್ಚಾ ಕೌಶಲವು ಅವರಿಗೆ ಗೌರವವನ್ನು ತಂದುಕೊಟ್ಟಿತು. ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ ಅವರ ಸತತ ವಿಜಯ ಅವರ ರಾಜಕೀಯ ಜೀವನಕ್ಕೆ ಬಲವಾದ ಅಡಿಪಾಯವನ್ನು ಹಾಕಿಕೊಟ್ಟಿತು..
  • 2014ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮೊದಲ ಅವಧಿಗೆ ಅಧಿಕಾರ ವಹಿಸಿಕೊಂಡ ಫಡ್ನವೀಸ್ ಮರಾಠ ಮೀಸಲಾತಿ ಬಿಕ್ಕಟ್ಟಿನಂತಹ ಸಂಕೀರ್ಣ ಸಮಸ್ಯೆಗಳನ್ನು ನಿಭಾಯಿಸಿದರು. ಮುಂಬೈ- ನಾಗ್ಪುರ ಸಮೃದ್ಧಿ ಮಹಾಮಾರ್ಗ್‌ನಂತಹ ದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ಮುನ್ನಡೆಸಿದರು. ನೀರಾವರಿ ಹಗರಣವನ್ನು ಬಯಲಿಗೆಳೆಯುವಲ್ಲಿ ಅವರ ಪಾತ್ರ ಅವರ ಖ್ಯಾತಿಯನ್ನು ಗಟ್ಟಿಗೊಳಿಸಿತು. ರಾಜ್ಯಾದ್ಯಂತ ನೀರಿನ ನಿರ್ವಹಣೆಗಾಗಿ ಜಲ ಯುಕ್ತ ಶಿವರ್‌ನಂತಹ ಮಹತ್ವದ ಉಪಕ್ರಮಗಳನ್ನು ಪ್ರಾರಂಭಿಸಿದರು.
  • ಇಷ್ಟೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡರೂ ಫಡ್ನವೀಸ್ ಅವರ ರಾಜಕೀಯ ಹಾದಿ ಸುಗಮವಾಗಿರಲಿಲ್ಲ. 2019 ರಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಒಳಗೆ ಅಜಿತ್ ಪವಾರ್ ಅವರ ದಂಗೆಯ ಪ್ರಯತ್ನವು ವಿಫಲವಾದ ಅನಂತರ ಎರಡನೇ ಅವಧಿಗೆ ಕೇವಲ ಐದು ದಿನಗಳ ಮುಖ್ಯಮಂತ್ರಿಯಾದರು.
  • ಪ್ರತಿಪಕ್ಷ ನಾಯಕರ ವಿರುದ್ಧ ಸಂಭಾವ್ಯ ಸಂಚನ್ನು ಬಹಿರಂಗಪಡಿಸುವಲ್ಲಿ ಫಡ್ನವೀಸ್ ಅವರ ಪಾತ್ರವು ರಾಜಕೀಯ ತಂತ್ರಗಾರನಾಗಿ ಅವರ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿತು.

ಮೂರನೇ ಬಾರಿಗೆ ಸಿಎಂ

ಮೂರನೇ ಬಾರಿಗೆ ಇದೀಗ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿರುವ ಫಡ್ನವೀಸ್ 2024ರ ಡಿಸೆಂಬರ್ 5ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಅವರ ರಾಜಕೀಯ ಜೀವನ ಹೆಚ್ಚು ಸವಾಲಿನದ್ದಾಗಿದೆ. 7.82 ಲಕ್ಷ ಕೋಟಿ ರೂ. ಸಾಲ ಮತ್ತು ಬೆಳೆಯುತ್ತಿರುವ ವಿತ್ತೀಯ ಕೊರತೆಯು ವರ್ಷಾಂತ್ಯದ ವೇಳೆಗೆ 2 ಲಕ್ಷ ಕೋಟಿ ರೂ. ಹೆಚ್ಚಾಗುವ ಸಾಧ್ಯತೆ ಇದೆ. ಲಡ್ಕಿ ಬಹೇನ್‌ ಯೋಜನೆ ಮತ್ತು ರೈತರಿಗೆ ಉಚಿತ ವಿದ್ಯುತ್‌ನಂತಹ ಜನಪರ ಯೋಜನೆಗಳಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಸಂಕಷ್ಟದಲ್ಲಿದೆ.

ಫಡ್ನವಿಸ್ ಅವರು ತಮ್ಮ ಇಬ್ಬರು ಉಪ ಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೊಂದಿಗೆ ಸೂಕ್ಷ್ಮ ಸಂಬಂಧವನ್ನು ಕಾಪಾಡಿಕೊಳ್ಳಬೇಕು. ಸಮ್ಮಿಶ್ರ ಸರ್ಕಾರದಲ್ಲಿನ ಸಂಕೀರ್ಣವಾದ ಅಧಿಕಾರದ ಸಮತೋಲನವನ್ನು ಅವರು ಕಾಪಾಡಿಕೊಳ್ಳಲು ವೈಯಕ್ತಿಕ ಮತ್ತು ರಾಜಕೀಯ ಸಂಕೀರ್ಣತೆಗಳೆರಡನ್ನೂ ನಿರ್ವಹಿಸುವ ಅವಶ್ಯಕತೆಯಿದೆ. ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದ ರಾಜಕೀಯದಲ್ಲಿ ಜಾತಿ ರಾಜಕೀಯವು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ.

Maha Kumbh Mela: ಮಹಾಕುಂಭ ಮೇಳದಲ್ಲಿ ತಲೆ ಎತ್ತಲಿದೆ ತಿರುಪತಿ ವೆಂಕಟೇಶ್ವರ ದೇವಾಲಯ

ಮಹಾರಾಷ್ಟ್ರದ ಭವಿಷ್ಯವೇನು?

ಮೂರನೇ ಅವಧಿಯು ಫಡ್ನವೀಸ್ ಅವರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾದ ಕ್ಷಣ. ಹಿಂದಿನ ಅಧಿಕಾರಾವಧಿಯಲ್ಲಿ ಅವರು ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸಲು ಮತ್ತು ರಾಜಕೀಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಮರ್ಥರಾಗಿದ್ದರು. ಈಗ ಅವರು 2029 ರ ವೇಳೆಗೆ ಸಂಪೂರ್ಣ ಬಹುಮತವನ್ನು ಪಡೆಯಲು ಬಿಜೆಪಿ ಹೈಕಮಾಂಡ್‌ನ ನಿರೀಕ್ಷೆಗಳನ್ನು ಪೂರೈಸಲು ಹಣಕಾಸಿನ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಬೇಕಿದೆ.