Thursday, 12th December 2024

ಹಳಿ ದಾಟುತ್ತಿದ್ದ ಮೂವರು ವ್ಯಕ್ತಿಗಳ ಸಾವು

ನ್‌ಬಾದ್‌ : ಜಾರ್ಖಂಡ್‌ನ ಧನ್‌ಬಾದ್ ರೈಲ್ವೆ ವಿಭಾಗದಲ್ಲಿ ಹಳಿ ದಾಟುತ್ತಿದ್ದ ಮೂವರು ವ್ಯಕ್ತಿಗಳು ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಶುಕ್ರವಾರ ಸಂಜೆ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಗೊಮೊಹ್‌ ರೈಲ್ವೆ ನಿಲ್ದಾಣದಲ್ಲಿ ಘಟನೆ ನಡೆದಿದೆ ಎಂದು ಆರ್‌ಪಿಎಫ್‌ ಇನ್ಸ್‌ಪೆಕ್ಟರ್‌ ವಿಜಯ್‌ ಶಂಕರ್‌ ಹೇಳಿದ್ದಾರೆ.

‘ಹೌರಾ-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಗೊಮೊಹ್‌ ನಿಲ್ದಾಣದಲ್ಲಿ ನಿಲುಗಡೆ ಹೊಂದಿಲ್ಲ. ಅದನ್ನು ಅರಿಯದ ಮೂವರು ವ್ಯಕ್ತಿಗಳು ಪ್ಲಾಟ್‌ ಫಾರ್ಮ್‌ 3 ಅನ್ನು ತಲುಪಲು ರೈಲ್ವೆ ಹಳಿಗಳನ್ನು ದಾಟುತ್ತಿದ್ದ ವೇಳೆ ರೈಲಿನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಮೃತರ ದೇಹಗಳು ಸ್ಥಳದಿಂದ 500 ಮೀ ದೂರಕ್ಕೆ ಚದುರಿಹೋಗಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ಮನೋಜ್‌ ಸಾಬ್‌ (19), ಶಿವ ಚರಣ್‌ ಸಾಬ್‌ (20) ಮತ್ತು ಬಬ್ಲೂ ಕುಮಾರ್ (20) ಎಂದು ಗುರುತಿಸಲಾಗಿದೆ. ಅವರು ಪ್ಲಾಟ್‌ಫಾರ್ಮ್‌ 4ರಲ್ಲಿ ಅಸನ್ಸೋಲ್‌-ಗೊಮೊಹ್‌ ಪ್ಯಾಸೆಂಜರ್‌ ರೈಲಿನಿಂದ ಇಳಿದು ಪ್ಲಾಟ್‌ಫಾರ್ಮ್ 3 ಅನ್ನು ತಲುಪಲು ರೈಲ್ವೆ ಹಳಿಗಳನ್ನು ದಾಟುತ್ತಿದ್ದರು.

ಅವರು ಧರಿಸಿದ್ದ ಬಟ್ಟೆಗಳನ್ನು ಆಧರಿಸಿ ಮೃತ ವ್ಯಕ್ತಿಗಳ ಗುರುತನ್ನು ಸಂಬಂಧಿಕರು ಪತ್ತೆ ಹಚ್ಚಿದ್ದಾರೆ’ ಎಂದು ಹೇಳಿದ್ದಾರೆ.