Saturday, 27th April 2024

ನಾಮಪತ್ರ ಸಲ್ಲಿಸಿದ ಜಗದೀಪ್ ಧಂಕರ್

ನವದೆಹಲಿ: ಭಾರತೀಯ ಜನತಾ ಪಕ್ಷದ ನಾಯಕ ಜಗದೀಪ್ ಧಂಕರ್ ಅವರು ಸೋಮವಾರ, ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಮತ್ತು ಇತರ ಹಲವಾರು ಹಿರಿಯ ನಾಯಕರು ಈ ವೇಳೆ ಉಪಸ್ಥಿತರಿದ್ದರು.

ಉಪರಾಷ್ಟ್ರಪತಿ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರ ಹೆಸರನ್ನು ಬಿಜೆಪಿ ಶನಿವಾರ ಘೋಷಿಸಿದೆ.

ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ ಭಾನುವಾರ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಜಗದೀಪ್ ಧಂಕರ್ ಅವರಿಗೆ ಬೆಂಬಲ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಕರೆ ಮಾಡಿ ಧಂಕರ್ ಅವರಿಗೆ ಬೆಂಬಲ ಕೋರಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಧಂಕರ್ ಅವರನ್ನು 2019 ರಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ನೇಮಿಸಲಾಯಿತು. ಏತನ್ಮಧ್ಯೆ, ಹಿರಿಯ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್ ಆಳ್ವ ಅವರನ್ನು ಆಗಸ್ಟ್ 6 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಹೆಸರಿಸಲಾಗಿದೆ.

error: Content is protected !!