Sunday, 15th December 2024

ಸಚಿವ ಧರಂ ಸಿಂಗ್ ಸೈನಿ ಬಿಜೆಪಿಗೆ ರಾಜೀನಾಮೆ

ಲಕ್ನೋ: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ದೊಡ್ಡ ಆಘಾತ ತಂದಿದೆ.

ಗುರುವಾರ ಸಚಿವ ಧರಂ ಸಿಂಗ್ ಸೈನಿ ಅವರು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಉತ್ತರಪ್ರದೇಶ ಸರ್ಕಾರ ಮೂವರು ಸಚಿವರು ರಾಜೀನಾಮೆ ನೀಡಿದಂತಾಗಿದೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ತಮಗೆ ನೀಡಿದ್ದ ನಿವಾಸ ಮತ್ತು ಭದ್ರತೆಯನ್ನು ತೊರೆದಿದ್ದರು. ಈ ಸಂದರ್ಭದಲ್ಲಿ ಸೈನಿ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿ ಹಬ್ಬಿತ್ತು.

ಉತ್ತರಪ್ರದೇಶದಲ್ಲಿ ಕ್ಯಾಬಿನೆಟ್ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಮೊದಲಿಗೆ ರಾಜೀನಾಮೆ ನೀಡಿದ್ದರು.

ದಲಿತರು, ಹಿಂದುಳಿದ ವರ್ಗ, ರೈತರನ್ನು ನಿರ್ಲಕ್ಷಿಸಿದ್ದು, ಈ ಹಿನ್ನೆಲೆಯಲ್ಲಿ ತಾನು ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ಸ್ವಾಮಿ ಪ್ರಸಾದ್ ತಿಳಿಸಿದ್ದರು. ಬಿಜೆಪಿ ಶಾಸಕರಾದ ಬ್ರಜೇಶ್ ಪ್ರಜಾಪತಿ, ರೋಶನ್ ಲಾಲ್ ವರ್ಮಾ, ಭಗ್ವತಿ ಸಾಗರ್, ಮುಖೇಶ್ ವರ್ಮಾ, ವಿನಯ್ ಸಾಂಖ್ಯ ಸೇರಿದಂತೆ ಹಲವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ ಒಟ್ಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಫೆಬ್ರುವರಿ 10ರಿಂದ ಮೊದಲ ಹಂತದ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.