Thursday, 12th December 2024

Mohan Bhagwat : ಧರ್ಮ ಭಾರತದ ಸಾರ, ಧಾರ್ಮಿಕ ಆಚರಣೆಯಲ್ಲ; ವಿಜಯದಶಮಿ ಭಾಷಣದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌

Mohan Bhagwat

ನವದೆಹಲಿ: ಧರ್ಮ ಎಂಬುದು ಭಾರತದ ಮೌಲ್ಯವನ್ನು ಪ್ರತಿನಿಧಿಸುತ್ತದೆಯೇ ಹೊರತು ಧಾರ್ಮಿಕ ಆಚರಣೆಯಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಶನಿವಾರ ಹೇಳಿದ್ದಾರೆ. ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಚೇರಿಯಲ್ಲಿ ವಿಜಯ ದಶಮಿ ಭಾಷಣದಲ್ಲಿ ಅವರು ಅನೇಕ ಧರ್ಮಗಳಿದ್ದರೂ, ಅವುಗಳನ್ನು ಸಂಪರ್ಕಿಸುವ ಆಧ್ಯಾತ್ಮಿಕತೆಯೇ ನೈಜ ಧರ್ಮದ ವ್ಯಾಖ್ಯಾನ ಎಂದರು. ಆರ್‌ಎಸ್‌ಎಸ್‌ ಶತಮಾನೋತ್ಸವಕ್ಕೆ ಪ್ರವೇಶ ಪಡೆದ ಹಿನ್ನೆಲೆಯಲ್ಲಿ ಸರಸಂಘಚಾಲಕರ ಭಾಷಣ ವಿಶೇಷ ಎನಿಸಿದೆ.

ಭಾಗವತ್ ಅವರು ‘ಧರ್ಮ’ವನ್ನು ಸಾರ್ವತ್ರಿಕ, ಶಾಶ್ವತ (ಸನಾತನ) ಮತ್ತು ಬ್ರಹ್ಮಾಂಡದ ಅಸ್ತಿತ್ವದೊಂದಿಗೆ ಅಂತರ್ಗತವಾಗಿದೆ ಎಂದು ಅಭಿಪ್ರಾಯಪಟ್ಟರು. ‘ಹಿಂದೂ ಧರ್ಮ’ ಹೊಸದಾಗಿ ಸಂಶೋಧನೆಗೊಂಡ ಅಥವಾ ಸೃಷ್ಟಿ ಮಾಡಿದ ವಿಷಯವಲ್ಲ. ಅದು ಮಾನವೀಯತೆಯನ್ನೇ ಒಳಗೊಂಡಿರುವ ಜಗತ್ತಿಗೆ ಸೇರಿದ ಒಂದು ಧರ್ಮ ಎಂದು ಹೇಳಿದರು.

ಜಗತ್ತಿನಲ್ಲಿ ಹಲವಾರು ಮತಾಚರಣೆಗಳಿವೆ. ಆದರೆ, ಅವುಗಳ ಹಿಂದಿನ ಧರ್ಮ ಮತ್ತು ಆಧ್ಯಾತ್ಮಿಕತೆಯೇ ನೈಜ ಧರ್ಮವನ್ನು ಪ್ರತಿನಿಧಿಸುತ್ತದೆ. ಧರ್ಮವು ಭಾರತದ ಜೀವನವಾಗಿದೆ. ಅದು ನಮ್ಮ ಸ್ಫೂರ್ತಿ. ಅದಕ್ಕೆ ಬೃಹತ್‌ ಇತಿಹಾಸವಿದೆ ಹಾಗೂ ಧರ್ಮಕ್ಕಾಗಿ ಜನರು ತ್ಯಾಗ ತಮ್ಮನ್ನು ತಾವು ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ನಾವು ಯಾರು? ನಾವು ನಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುತ್ತೇವೆ ಏಕೆಂದರೆ ಈ ಧರ್ಮವು ಸಾರ್ವತ್ರಿಕ, ಸನಾತನವಾಗಿದೆ ಮತ್ತು ಬ್ರಹ್ಮಾಂಡದ ಉಗಮದೊಂದಿಗೆ ಅಸ್ತಿತ್ವಕ್ಕೆ ಬಂದಿತು. ಅದು ಎಲ್ಲರಿಗೂ ಸೇರಿದೆ. ನಾವು ಅದನ್ನು ಕಂಡುಹಿಡಿದಿಲ್ಲ ಅಥವಾ ಯಾರಿಗೂ ನೀಡಿಲ್ಲ ಅದನ್ನು ಗುರುತಿಸಿದ್ದೇವೆ. ಆದ್ದರಿಂದ, ನಾವು ಅದನ್ನು ಹಿಂದೂ ಧರ್ಮ ಎಂದು ಕರೆಯುತ್ತೇವೆ. ಇದು ಮಾನವೀಯತೆ ಮತ್ತು ಜಗತ್ತಿ ಧರ್ಮ ಎಂದು ಮುಂದುವರಿದ ಅವರು ಹೇಳಿದರು.

ಬಾಂಗ್ಲಾದಲ್ಲಿ ಹಿಂದೂಗಳ ದಬ್ಬಾಳಿಕೆಗೆ ಕಳವಳ

ತಮ್ಮ ಭಾಷಣದಲ್ಲಿ ಭಾಗವತ್ಅ ವರು ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಅಭಿಯಾನವನ್ನು ಆಕ್ಷೇಪಿಸಿದರು. ಆ ದೇಶವು ಪಾಕಿಸ್ತಾನದಂತೆಯೇ ಆಗುತ್ತಿದೆ ಎಂದ ಅವರು, ನೆರೆಯ ದೇಶದಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರದ ಕಳವಳ ವ್ಯಕ್ತಪಡಿಸಿದರು.

ಬಾಂಗ್ಲಾದೇಶದಲ್ಲಿ ನಮಗೆ ಭಾರತದಿಂದ ಬೆದರಿಕೆ ಇದೆ ಎಂಬ ಚರ್ಚೆಗಳು ನಡೆಯುತ್ತಿವೆ. ನಾವು ಪಾಕಿಸ್ತಾನದ ಪರವಾಗಿ ನಿಲ್ಲಬೇಕಾಗಿದೆ ಎಂದು ಅವರು ಭಾವಿಸಿದ್ದಾರೆ ಭಾರತವನ್ನು ತಡೆಯಬಲ್ಲ ಪರಮಾಣು ಶಸ್ತ್ರಾಸ್ತ್ರ ಅವರು ಹೊಂದಿದ್ದಾರೆ ಎಂಬುದೇ ಅವರ ಅಭಿಪ್ರಾಯವಾಗುತ್ತಿದೆ. ಭಾರತದಲ್ಲೂ ಅಂತಹ ಪರಿಸ್ಥಿತಿಗಳನ್ನು ಸೃಷ್ಟಿಸುವುದು ಅವರ ಬಯಕೆಯಾಗಿದೆ ಎಂದು ಭಾಗವತ್ ಹೇಳಿದರು.

ಕೋಲ್ಕೊತಾ ಘಟನೆಗೆ ಖಂಡನೆ

ಕೋಲ್ಕತಾ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ನಾಚಿಕೆಗೇಡಿನ ಸಂಗತಿ ಎಂದು ಅವರು ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ವಿಷಾದಿಸಿದ್ದಾರೆ. ಆರ್‌ಜಿ ಕಾರ್ ಆಸ್ಪತ್ರೆಯಲ್ಲಿ ನಡೆದದ್ದು ನಾಚಿಕೆಗೇಡಿನ ಸಂಗತಿ. ಆದರೆ ಇದು ಒಂದೇ ಒಂದು ಘಟನೆಯಲ್ಲ. ಇಂತಹ ಘಟನೆಗಳು ನಡೆಯದಂತೆ ನಾವು ಜಾಗರೂಕರಾಗಿರಬೇಕು. ಅಪರಾಧಿಗಳನ್ನು ರಕ್ಷಿಸಿದ ರೀತಿ ಅಪರಾಧ ಮತ್ತು ರಾಜಕೀಯದ ನಡುವಿನ ಮೈತ್ರಿಯ ಫಲಿತಾಂಶ ” ಎಂದು ಅವರು ಹೇಳಿದರು.

ಇದನ್ನೂ ಓದಿ: Godess Kali : ಬಾಂಗ್ಲಾದಲ್ಲಿ ಕಾಳಿ ದೇವಸ್ಥಾನದಲ್ಲಿ ಕಿರೀಟ ಕಳ್ಳತನ; ಭಾರತದ ಖಂಡನೆ

ಒಟಿಟಿ ಕಳಪೆ ಕಂಟೆಂಟ್‌ಗೆ ಅಪಾಯಕಾರಿ

ಮಕ್ಕಳ ಮೇಲೆ ಆಧುನಿಕ ತಂತ್ರಜ್ಞಾನ ಮತ್ತು ಒಟಿಟಿ ಕಂಟೆಂಟ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ವಿವಿಧ ವ್ಯವಸ್ಥೆಗಳು ಮತ್ತು ಸಂಸ್ಥೆಗಳು ಹರಡಿದ ವಿಕೃತ ಪ್ರಚಾರ ಮತ್ತು ಕಳಪೆ ಮೌಲ್ಯಗಳು ಭಾರತದ ಯುವ ಪೀಳಿಗೆಯ ಮನಸ್ಸು, ಮಾತು ಮತ್ತು ಕಾರ್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ಭಾಗವತ್ ಹೇಳಿದರು.

ಒಟಿಟಿ ಕಂಟೆಂಟ್‌ ಮೇಲೆ ನಿಯಂತ್ರಣದ ಕೊರತೆಯು ಮಕ್ಕಳನ್ನು ಅನುಚಿತ ವಿಷಯಗಳಿಗೆ ಒಡ್ಡುತ್ತಿದೆ ಎಂದು ಅವರು ಒತ್ತಿಹೇಳಿದರು. ಸಮಾಜದ ನೈತಿಕ ರಚನೆಯನ್ನು ರಕ್ಷಿಸಲು ಜಾಹೀರಾತುಗಳು ಮತ್ತು ಮಾಧ್ಯಮಗಳ ಮೇಲೆ ಕಾನೂನು ಮೇಲ್ವಿಚಾರಣೆ ಮಾಡಬೇಕು ಎಂದು ಕರೆಕೊಟ್ಟರು.

ಮೊಬೈಲ್ ಫೋನ್‌ಗಳು ಈಗ ಮಕ್ಕಳ ಕೈಗೂ ತಲುಪಿವೆ. ಒಟಿಟಿ ಪ್ಲಾಟ್‌ಪಾರ್ಮ್‌ಗಳಲ್ಲಿ ಏನು ತೋರಿಸಲಾಗುತ್ತಿದೆ ಮತ್ತು ನಮ್ಮ ಮಕ್ಕಳು ಏನು ನೋಡುತ್ತಿದ್ದಾರೆ ಎಂಬುದರ ಮೇಲೆ ಯಾವುದೇ ನಿಯಂತ್ರಣವಿಲ್ಲ ಎಂದು ಭಾಗವತ್ ಹೇಳಿದರು.