ಅಹಮದಾಬಾದ್: ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಹರಪ್ಪ ನಾಗರೀಕತೆ ಯುಗದ ಧೋಲಾವಿರಾ ನಗರ ಸೇರ್ಪಡೆಯಾಗಿದೆ.
ಗುಜರಾತ್ನ ರಾಣ್ ಜಿಲ್ಲೆಯ ಕಚ್ ಎಂಬಲ್ಲಿ ಧೋಲಾವಿರಾ ನಗರವಿದ್ದು, ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೊ) ಈ ತಾಣವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿರುವುದಾಗಿ ಮಂಗಳವಾರ ಘೋಷಿಸಿದೆ.
“ಹರಪ್ಪ ಯುಗದ ನಗರ ಧೋಲಾವಿರಾವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಅಭಿನಂದನೆ ಗಳು” ಎಂದು ಯುನೆಸ್ಕೋ ಟ್ವೀಟ್ ಮಾಡಿದೆ.
“ಧೋಲಾವಿರಾ ಇದೀಗ ಭಾರತಕ್ಕೆ ದೊರೆತ ನಲವತ್ತನೇ ನಿಧಿಯಂತಾಗಿದೆ” ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ. “ಭಾರತಕ್ಕೆ ಇಂದು ಹೆಮ್ಮೆಯ ದಿನ. ಅದರಲ್ಲೂ ಗುಜರಾತ್ ಜನರಿಗೆ ಅತಿ ಸಂತಸದ ದಿನ. ಧೋಲಾವಿರಾ ನಗರವನ್ನು ವಿಶ್ವಪಾರಂಪರಿಕ ತಾಣದಲ್ಲಿ ಸೇರಿಸಿರುವುದು ಹೆಮ್ಮೆಯ ಸಂಗತಿ. 2014ರಿಂದ ಭಾರತದ ಹತ್ತು ಹೊಸ ತಾಣಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಕೊಂಡಿವೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಕೂಡ ಟ್ವೀಟ್ ಮಾಡಿದ್ದು, “ಧೋಲಾವಿರಾ ಪ್ರಮುಖ ನಗರ ಕೇಂದ್ರವಾಗಿದ್ದು, ನಮ್ಮ ಇತಿಹಾಸ ದೊಂದಿಗಿನ ಅತಿಮುಖ್ಯ ಕೊಂಡಿಯಾಗಿದೆ. ಇತಿಹಾಸ, ಸಂಸ್ಕೃತಿ, ಪುರಾತತ್ವದಲ್ಲಿ ಆಸಕ್ತಿ ಇರುವವರು ಭೇಟಿ ಕೊಡಲೇಬೇಕಾದ ತಾಣವಿದು” ಎಂದು ಹೊಗಳಿದ್ದಾರೆ. ತೆಲಂಗಾಣದ ವಾರಂಗಲ್ ಜಿಲ್ಲೆಯ ಪಾಲಂಪೇಟ್ ಗ್ರಾಮದಲ್ಲಿನ ರಾಮಪ್ಪ ದೇವಸ್ಥಾನಕ್ಕೆ ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಗೌರವ ನೀಡಲಾಗಿತ್ತು.
ಹರಪ್ಪ ನಾಗರೀಕತೆ, ಸಂಸ್ಕೃತಿಯನ್ನು ಪ್ರತಿನಿಧಿಸುವಂತಿರುವ ಧೋಲಾವಿರಾಗೆ ಇದೀಗ ವಿಶ್ವಪಾರಂಪರಿಕ ತಾಣ ಮನ್ನಣೆ ಗಳಿಸಿಕೊಂಡಿದೆ