Monday, 25th November 2024

Digital Payment: ಇತಿಹಾಸ ಸೃಷ್ಟಿಸಿದ ಆನ್‌ಲೈನ್‌ ಪೇಮೆಂಟ್‌; ಒಂದೇ ತಿಂಗಳಿನಲ್ಲಿ 23.5 ಲಕ್ಷ ಕೋಟಿ ರೂ. ವ್ಯವಹಾರ

Digital payment

ನವದೆಹಲಿ: ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಆಧಾರಿತ ಡಿಜಿಟಲ್ ವಹಿವಾಟುಗಳು (Digital payment) ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ತಿಂಗಳಿನಿಂದ ತಿಂಗಳಿಗೆ ಡಿಜಿಟಲ್‌ ವಹಿವಾಟು ಮಾಡುವವರ ಸಂಖ್ಯೆ ವೃದ್ಧಿಸುತ್ತಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) ಶುಕ್ರವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ವ್ಯವಹಾರದಲ್ಲಿ ಶೇ. 10ರಷ್ಟು ಮತ್ತು ಮೌಲ್ಯದಲ್ಲಿ ಶೇ. 14ರಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ಅಕ್ಟೋಬರ್‌ನಲ್ಲಿ 23.5 ಲಕ್ಷ ಕೋಟಿ ರೂ. ಮೌಲ್ಯದ 16.58 ಶತಕೋಟಿ ವಹಿವಾಟು ನಡೆದಿದೆ ಎಂದು ತಿಳಿದು ಬಂದಿದೆ.

ಯುಪಿಐನ ಕಾರ್ಯಾನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟಿನ ವಹಿವಾಟು ಕಂಡು ಬಂದಿದೆ. ಸೆಪ್ಟೆಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇ. 4ರಷ್ಟು ಏರಿಕೆ ಕಂಡಿದೆ. ಅಕ್ಟೋಬರ್‌ನಲ್ಲಿ ದೈನಂದಿನ ಯುಪಿಐ ವಹಿವಾಟುಗಳು ಸೆಪ್ಟೆಂಬರ್‌ಗಿಂತ ಜಾಸ್ತಿ ಇವೆ. ತಕ್ಷಣದ ಪಾವತಿ ಸೇವೆ (IMPS-ಐಎಂಪಿಎಸ್) ವಹಿವಾಟುಗಳು ಸೆಪ್ಟೆಂಬರ್‌ನಲ್ಲಿ 5.65 ಲಕ್ಷ ಕೋಟಿ ರೂ. ಇತ್ತು. ಅದು ಅಕ್ಟೋಬರ್‌ನಲ್ಲಿ ಶೇ. 11ರಷ್ಟು ಹೆಚ್ಚಾಗಿದೆ.  ಇನ್ನು ಫಾಸ್ಟ್‌ ಟ್ಯಾಗ್‌ ವಹಿವಾಟು ನೋಡಿದರೆ  ಸೆಪ್ಟೆಂಬರ್‌ನಲ್ಲಿ ಇದು 5,620 ಕೋಟಿ ರೂ. ಇದ್ದರೆ ಅಕ್ಟೋಬರ್‌ನಲ್ಲಿ 6,115 ಕೋಟಿ ರೂ. ವ್ಯವಹಾರ ನಡೆದಿದೆ.

ಇದನ್ನೂ ಓದಿ : Money Tips: ಗೂಗಲ್‌ ಪೇ ಅಥವಾ ಫೋನ್‌ ಪೇಯಿಂದ ತಪ್ಪಾದ ನಂಬರ್‌ಗೆ ಹಣ ಪಾವತಿಸಿದರೆ ಏನು ಮಾಡಬೇಕು?

NPCI ಡೇಟಾ ಪ್ರಕಾರ, ಅಕ್ಟೋಬರ್‌ನಲ್ಲಿ ಆಧಾರ್ ಸಕ್ರಿಯಗೊಳಿಸಿ ಪಾವತಿ ನಡೆಸುವ ವ್ಯವಸ್ಥೆಯಲ್ಲಿ (AePS) 10,59,22,59,300 ರೂ. ವಹಿವಾಟುಗಳು ನಡೆದಿವೆ. ಅಂದರೆ ಸೆಪ್ಟೆಂಬರ್‌ಗಿಂತ ಶೇ. 26ರಷ್ಟು ಹೆಚ್ಚಳ ದಾಕಲಾಗಿದೆ.

ರಿಸರ್ವ್ ಬ್ಯಾಂಕ್‌ನ ಕರೆನ್ಸಿ ಮ್ಯಾನೇಜ್‌ಮೆಂಟ್ ಇಲಾಖೆಯ ಅರ್ಥ ಶಾಸ್ತ್ರಜ್ಞ ಪ್ರದೀಪ್ ಭುಯಾನ್ ಅವರು ಇತ್ತೀಚಿಗೆ ಪತ್ರಿಕೆಯೊಂದಕ್ಕೆ ಈ ಬಗ್ಗೆ ಅಂಕಣ ಬರೆದಿದ್ದು, ಭಾರತದಲ್ಲಿ ಡಿಜಿಟಲ್‌ ಹಣ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದರು. ʼʼಕೊರೊನಾ ನಂತರ ಭಾರತವು ಬದಲಾಗುತ್ತಿದೆ. ಎಲ್ಲ ಕಡೆ ಡಿಜಿಟಲ್‌ ರೂಪದಲ್ಲಿ ಹಣ ಪಾವತಿಸಲು ಸಾಧ್ಯವಾಗುತ್ತಿದೆ. ಇದು ಭಾರತದ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆʼʼ ಎಂದು ಹೇಳಿದ್ದರು. ಈಗ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಪ್ರಮಾಣ ಶೇ. 40-48ಕ್ಕೆ ಏರಿಕೆ ಕಂಡಿದೆ. ಈ ಮೊದಲು ಅಂದರೆ 2024ರ ಮಾರ್ಚ್‌ಗಿಂತ ಹಿಂದೆ ಇದು ಶೇ. 14-19ರಷ್ಟು ಇತ್ತು ಎಂದು ಅವರು ಹೇಳಿದ್ದರು.

ಅಕ್ಟೋಬರ್‌ನಲ್ಲಿ ಸಾಲು ಸಾಲು ಹಬ್ಬಗಳಿದ್ದರಿಂದ ಈ ರೀತಿಯ ಏರಿಕೆ ಕಂಡಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಭಾರತ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯತ್ತ ನಿಧಾನವಾಗಿ ಬದಲಾಗುತ್ತಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ 2016ರ ಏಪ್ರಿಲ್‌ನಲ್ಲಿ ಯುಪಿಐ ಕಾರ್ಯಾರಂಭ ಮಾಡಿತ್ತು.