Monday, 14th October 2024

ಚಿಲ್ಲರೆ ಡಿಜಿಟಲ್ ರೂಪಾಯಿ ಡಿ.1ರಿಂದ ಪ್ರಾಯೋಗಿಕವಾಗಿ ಜಾರಿ

ಮುಂಬೈ: ಚಿಲ್ಲರೆ ಡಿಜಿಟಲ್ ರೂಪಾಯಿಯನ್ನು ಡಿಸೆಂಬರ್ 1ರಿಂದ ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ಒಂದು ತಿಂಗಳಲ್ಲಿ ಚಿಲ್ಲರೆ ಡಿಜಿಟಲ್ ರೂಪಾಯಿಯನ್ನು ಪ್ರಾಯೋಗಿಕ ಮಾದರಿಯಲ್ಲಿ ಆರಂಭಿಸುವುದಾಗಿ ಆರ್ ಬಿಐ ಅಕ್ಟೋಬರ್ 31ರಂದು ತಿಳಿಸಿತ್ತು. ಗ್ರಾಹಕರು ಮತ್ತು ವ್ಯಾಪಾರಿಗಳ ಆಪ್ತ ಬಳಕೆದಾರರ ಗುಂಪು ಗಳಲ್ಲಿ ಆಯ್ದ ಕಡೆಗಳಲ್ಲಿ ಆರ್ ಬಿಐ ಪ್ರಾಯೋ ಗಿಕ ಮಾದರಿಯಲ್ಲಿ ಆರಂಭಿಸುತ್ತಿದ್ದು, ಡಿಜಿಟಲ್ ಟೋಕನ್ ಮಾದರಿಯಲ್ಲಿರಲಿದ್ದು ಕಾನೂನು ಟೆಂಡರ್ ನ್ನು ಪ್ರತಿನಿಧಿಸುತ್ತದೆ ಎಂದು ಆರ್ ಬಿಐ ಹೇಳಿಕೆಯಲ್ಲಿ ತಿಳಿಸಿತ್ತು.
ಕಾಗದದ ಕರೆನ್ಸಿ ಮತ್ತು ನಾಣ್ಯಗಳ ಮಾದರಿಯಲ್ಲಿ ಅದೇ ಮುಖಬೆಲೆಯಲ್ಲಿ ಡಿಜಿಟಲ್ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು. ಮಧ್ಯವರ್ತಿ ಬ್ಯಾಂಕುಗಳ ಮೂಲಕ ಇದನ್ನು ವಿತರಣೆ ಮಾಡಲಾಗುವುದು. ಇದರಲ್ಲಿ ಭಾಗಿಯಾಗುವ ಬ್ಯಾಂಕುಗಳು ಮತ್ತು ಮೊಬೈಲ್ ಫೋನ್ ಗಳು ಮತ್ತು ಸಾಧನಗಳಲ್ಲಿ ನೀಡುವ ಡಿಜಿಟಲ್ ವ್ಯಾಲೆಟ್ ಮೂಲಕ ಇಆರ್ ಎಸ್-ಆರ್ ನ ವಹಿವಾಟು ನಡೆಯುತ್ತದೆ.