Thursday, 12th December 2024

Dinesh Gundu Rao: ಸಾವರ್ಕರ್‌ ಗೋಹತ್ಯೆಯ ವಿರೋಧಿಯಾಗಿರಲಿಲ್ಲ; ಕಿಡಿ ಹೊತ್ತಿಸಿದ ದಿನೇಶ್ ಗುಂಡೂರಾವ್ ಹೇಳಿಕೆ: ಬಿಜೆಪಿ ನಾಯಕರು ಸಿಡಿಮಿಡಿ

Covid Scam

ಮುಂಬೈ: ಬ್ರಾಹ್ಮಣ ಸಮಾಜದ ಸಾವರ್ಕರ್ (Savarkar) ಅವರು ಮಾಂಸ ಸೇವಿಸುತ್ತಿದ್ದರು.‌ ಮಾಂಸಾಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಅಲ್ಲದೆ ಅವರು ಗೋಹತ್ಯೆಯನ್ನು ಅವರು ವಿರೋಧಿಸುತ್ತಿರಲಿಲ್ಲ ಎನ್ನುವ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅವರ ವಿವಾದಾತ್ಮಕ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಮುಖಂಡರು ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಕರ್ನಾಟಕ ಮಾತ್ರವಲ್ಲಿ ದೇಶದ ವಿವಿಧ ಭಾಗಗಳ ಬಿಜೆಪಿ ನಾಯಕರು ದಿನೇಶ್ ಗುಂಡೂರಾವ್ ವಿರುದ್ದ ಕಿಡಿಕಾರಿದ್ದಾರೆ.

ದಿನೇಶ್ ಗುಂಡೂರಾವ್ ಅವರು ಮಾನಸಿಕ ಸ್ಥೀಮಿತ ಕಳೆದುಕೊಂಡಿದ್ದಾರೆ. ಹೀಗೆ ಮಹಾನ್‌ ವ್ಯಕ್ತಿಗಳ ಬಗ್ಗೆ ಅವರು ಸುಳ್ಳು ಹೇಳಿಕೆಯನ್ನು ನೀಡುತ್ತ ಹೋದರೆ ಜನ ಸಾಮಾನ್ಯರು ಮುಂದೊಂದು ದಿನ ದಿನೇಶ್ ಗುಂಡೂರಾವ್ ಅವರನ್ನು ಕಡೆಗಣಿಸಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಜತೆಗೆ ಬಿಜೆಪಿ ಮುಖಂಡರಾದ ಮುಖ್ತಾರ್‌ ಅಬ್ಬಾಸ್‌ ನಖ್ವಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಮತ್ತಿತರರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮುಖ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದೇನು?

ʼʼಇಂತಹ ವ್ಯಕ್ತಿಗಳ ಬಾಲಿಶ ಹೇಳಿಕೆ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಇದೇ ರೀತಿಯ ಹೇಳಿಕೆ ನೀಡುತ್ತಾ ಹೋದರೆ ಸಮಾಜ ಅವರನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅವರು ಮೊದಲು ಮಾನಸಿಕ ಕೇಂದ್ರಕ್ಕೆ ತೆರಳಿ ತಪಾಸಣೆ ನಡೆಸಲಿ. ದೇಶದ ಮಹಾನ್‌ ವ್ಯಕ್ತಿಗಳ ಬಗ್ಗೆ ಮಾತನಾಡುವ ಮುನ್ನ ಅವರ ಬಗ್ಗೆ ಕೂಲಂಕುಷ ಅಧ್ಯಯನ ಮಾಡಲಿʼʼ ಎಂದು ಮುಖ್ತಾರ್‌ ಅಬ್ಬಾಸ್‌ ನಖ್ವಿ ತಿಳಿಸಿದ್ದಾರೆ.

ದೇವೇಂದ್ರ ಫಡ್ನವಿಸ್‌ ಹೀಳಿದ್ದು ಹೀಗೆ

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್‌ ಪ್ರತಿಕ್ರಿಯಿಸಿ, ʼʼಅವರಿಗೆ (ದಿನೇಶ್ ಗುಂಡೂರಾವ್) ಸಾವರ್ಕರ್‌ ಬಗ್ಗೆ ಏನೂ ಗೊತ್ತಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಅವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸಾವರ್ಕರ್‌ ಗೋಮಾತೆಯನ್ನು ಪೂಜ್ಯ ಭಾವನೆಯಿಂದ ಕಾಣುತ್ತಿದ್ದರು. ರಾಹುಲ್‌ ಗಾಂಧಿ ಸಾರ್ವಕರ್‌ ವಿರುದ್ಧ ನಡೆಸಿದ ಹೋರಾಟವನ್ನು ಈಗ ಕಾಂಗ್ರೆಸ್‌ ನಾಯಕರು ಮುಂದುವರಿಸುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

ಎಷ್ಟು ದಿನದವರೆಗೆ ಉದ್ಧವ್‌ ಠಾಕ್ರೆ ಎಷ್ಟು ದಿನ ಮೌನವಾಗಿರುತ್ತಾರೆ?

ಬಿಜೆಪಿಯ ಅಮಿತ್‌ ಮಾಳವಿಯಾ ಸಾವರ್ಕರ್‌ ಅವರನ್ನು ದೇಶಪ್ರೇಮಿ ಎಂದು ಕರೆದಿದ್ದಾರೆ. ʼʼಕಾಂಗ್ರೆಸ್ ನಿರಂತರವಾಗಿ ವೀರ್ ಸಾವರ್ಕರ್ ಅವರ ಅವಮಾನಿಸುತ್ತಿದ್ದು, ಉದ್ಧವ್ ಠಾಕ್ರೆ ಇದನ್ನು ಎಷ್ಟು ದಿನಗಳವರೆಗೆ ಸಹಿಸುತ್ತಾರೆ?ʼʼ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ನಾಯಕ, ಸಂಸದ ಅನುರಾಗ್‌ ಠಾಕೂರ್‌ ಕಾಂಗ್ರೆಸ್‌ ಅನ್ನು ಸುಳ್ಳು ಉತ್ಪಾದಿಸುವ ಕಾರ್ಖಾನೆ ಎಂದು ಕರೆದಿದ್ದಾರೆ. ಸಾವರ್ಕರ್‌ ವಿರುದ್ಧದ ಅವಮಾನವನ್ನು ದೇಶ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಏನಿದು ವಿವಾದ?

ಬೆಂಗಳೂರಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವಿವಾದಿತ ಹೇಳಿಕೆ ನೀಡಿದ್ದರು. ʼʼಬ್ರಾಹ್ಮಣ ಸಮಾಜದ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು.‌ ಮಾಂಸಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಹಾಗೆ ನೋಡಿದರೆ ಸಾವರ್ಕರ್ ಒಂದು ರೀತಿಯಲ್ಲಿ ಮಾಡರ್ನಿಷ್ಟ್ ಆಗಿಯೂ ಕಾಣುತ್ತಾರೆ. ಆದರೆ ಮೂಲಭೂತವಾದಿಯಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲ. ಇದು ಯುರೋಪ್‌ನಿಂದ ಬಂದಿರುವಂತದ್ದು. ಸಾವರ್ಕರ್ ಯೂರೋಪ್‌ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಆದರೆ ಗಾಂಧೀಜಿಯವರು ಸಸ್ಯಹಾರಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತುʼʼ ಎಂದಿದ್ದರು.

Gandhi Jayanti: ಬ್ರಾಹ್ಮಣ ಸಾವರ್ಕರ್‌ ಮಾಂಸಾಹಾರವನ್ನು ಬಹಿರಂಗವಾಗಿ ಸಮರ್ಥಿಸುತ್ತಿದ್ದರು; ದಿನೇಶ್ ಗುಂಡೂರಾವ್