ಕಾನ್ಪುರ: ಬೆಳಕಿನ ಹಬ್ಬ ದೀಪಾವಳಿ (Diwali) ಸಂದರ್ಭದಲ್ಲಿ (Deepavali Tragedy ಉತ್ತರಪ್ರದೇಶದ ಕಾನ್ಪುರದಲ್ಲೊಂದು (Kanpur) ದುರ್ಘಟನೆ ಸಂಭವಿಸಿದೆ. ಇಲ್ಲಿನ ಕಾಕಾದೇವ್ (Kakadev) ಎಂಬಲ್ಲಿನ ಕುಟುಂಬ ದೇವಸ್ಥಾನದಲ್ಲಿ ಹಚ್ಚಿದ್ದ ಹಣತೆಯಿಂದ ಮನೆಗೆ ಬೆಂಕಿ ಹೊತ್ತಿಕೊಂಡ (Fire Accident) ಪರಿಣಾಮ ಉದ್ಯಮಿ ಸಂಜಯ್ ಶ್ಯಾಮ್ ದಾಸಾನಿ (Sanjay Shyam Dasani) (48) ಅವರ ಪತ್ನಿ ಕನಿಕಾ ದಾಸಾನಿ (Kanika Dasani) (42) ಹಾಗೂ ಮನೆ ಕೆಲಸದಾಕೆ ಚಬ್ಬಿ ಚೌಹಾಣ್ (Chhabi Chauhan) (24) ದುರಂತ ಸಾವಿಗೀಡಾಗಿದ್ದಾರೆ. ಮನೆಯ ಇಂಟೀರಿಯರ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರವನ್ನು ಬಳಸಿದ್ದ ಕಾರಣ ಬೆಂಕಿ ವೇಗವಾಗಿ ಹತ್ತಿಕೊಂಡು ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಆಹಾರೋದ್ಯಮದಲ್ಲಿ ಹೆಸರುವಾಸಿಯಾಗಿದ್ದ ದಾಸಾನಿ ಕುಟುಂಬ, ಅಂಬಾಜಿ ಫುಡ್ಸ್ (Ambaji Foods) ಮತ್ತು ಒಂದು ಬಿಸ್ಕತ್ತು ತಯಾರಿ ಘಟಕವನ್ನು ಹೊಂದಿತ್ತು. ಈ ಕುಟುಂಬವು ಪಾಂಡುನಗರದಲ್ಲಿ ಮೂರು ಅಂತಸ್ತಿನ ಭವ್ಯ ಬಂಗಲೆಯಲ್ಲಿ ವಾಸವಾಗಿತ್ತು. ದೀಪಾವಳಿಯ ಸಂದರ್ಭದಲ್ಲಿ ಈ ದಂಪತಿ ರಾತ್ರಿ ಊಟಕ್ಕೂ ಮೊದಲು ಸಾಂಪ್ರದಾಯಿಕ ಪೂಜಾ ವಿಧಾನಗಳನ್ನು ನೆರವೇರಿಸಿ ಬಳಿಕ ನಿದ್ರೆಗೆ ಜಾರಿದ್ದರು.
ಈ ಸಂದರ್ಭದಲ್ಲಿ ಉರಿಯುತ್ತಿದ್ದ ದೀಪವೊಂದರಿಂದ ಹತ್ತಿಕೊಂಡ ಬೆಂಕಿ ಬಳಿಕ ಶೀಘ್ರವಾಗಿ ರೂಮನ್ನೆಲ್ಲಾ ವ್ಯಾಪಿಸಿಕೊಂಡಿತು ಮತ್ತು ಬೆಂಕಿ ಹಾಗೂ ದಟ್ಟ ಹೊಗೆಯ ಕಾರಣದಿಂದ ಹಾಗೂ ಕೋಣೆಗೆ ಅಳವಡಿಸಿದ್ದ ಅಟೋಮ್ಯಾಟಿಕ್ ಡೋರ್ ವಿಪರೀತ ಬಿಸಿಯ ಕಾರಣದಿಂದ ಲಾಕ್ ಆದ ಕಾರಣ ರೂಂನಲ್ಲಿ ಮಲಗಿದ್ದ ದಂಪತಿ ಹೊರಬರಲು ಸಾಧ್ಯವಾಗದೇ ಬೆಂಕಿ ಮತ್ತು ಹೊಗೆಯ ಪ್ರಕೋಪಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೊಂದೆಡೆ, ಇವರ ಪುತ್ರ ಹರ್ಷ ದಾಸಾನಿ ಗೆಳೆಯರೊಂದಿಗೆ ದೀಪಾವಳಿ ಸಂಭ್ರಮಾಚರಣೆಗೆ ತೆರಳಿದ್ದ ಕಾರಣ ಬದುಕುಳಿಯುವಂತಾಗಿದೆ. ಹರ್ಷ ದಾಸಾನಿ ದೀಪಾವಳಿ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳಿದ ಸಂದರ್ಭದಲ್ಲಿ ತನ್ನ ಮನೆಯಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿ ಗಾಬರಿಗೊಂಡು ಅಕ್ಕಪಕ್ಕದವರನ್ನು ಕರೆದು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ. ಆದರೆ ಅಷ್ಟೊತ್ತಿಗಾಗಲೇ ಬೆಂಕಿ ಮನೆಯನ್ನೆಲ್ಲಾ ವ್ಯಾಪಿಸಿದ್ದ ಕಾರಣ ದಾಸಾನಿ ದಂಪತಿ ಮತ್ತು ಅವರನ್ನು ರಕ್ಷಿಸಲು ಪ್ರಯತ್ನಿಸಿದ ಮನೆ ಕೆಲಸದಾಕೆಯ ಪ್ರಾಣ ಬೆಂಕಿಗಾಹುತಿಯಾಗಿತ್ತು.
ಅಗ್ನಿ ಶಾಮಕ ದಳದ ಅಧಿಕಾರಿಗಳು (Fire officials) ನೀಡಿರುವ ಮಾಹಿತಿಯಂತೆ, ದೀಪದಿಂದ ಹೊತ್ತಿಕೊಂಡ ಬೆಂಕಿಯು ಇಂಟೀರಿಯರ್‌ನಲ್ಲಿ ಮರಗಳಿದ್ದ ಕಾರಣದಿಂದ ವೇಗವಾಗಿ ಬೆಡ್ ರೂಮ್ ಮತ್ತು ಬಾಲ್ಕನಿಗೆ ಹಬ್ಬಿದೆ. ಇನ್ನು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಫಾರೆನ್ಸಿಕ್ ತಂಡದ (forensic team) ಅಭಿಪ್ರಾಯದಂತೆ ಬೆಂಕಿ ಹರಡಿದ ತೀವ್ರತೆ ಮತ್ತು ಈ ಸಂದರ್ಭದಲ್ಲಿ ಅಟೊಮ್ಯಾಟಿಕ್ ಬಾಗಿಲು ಲಾಕ್ ಆದ ಕಾರಣದಿಂದ ಒಳಗಿದ್ದವರಿಗೆ ಯಾವುದೇ ರೀತಿಯಲ್ಲಿ ಹೊರಬಂದು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಅವರ ಜೀವವನ್ನು ಕಸಿದುಕೊಂಡಿದೆ.