Friday, 22nd November 2024

ಹೆದ್ದಾರಿಗಳ ಬಳಿ ಮದ್ಯದ ಅಂಗಡಿಗಳಿಗೆ ಕಡಿವಾಣ ಹಾಕಿ: ಸುಪ್ರೀಂ ನಿರ್ದೇಶನ

ನವದೆಹಲಿ: ಪ್ರಯಾಣದ ವೇಳೆ ದಾರಿ ಮಧ್ಯೆ ಮದ್ಯಪಾನ ಮಾಡುವ ಹಾಗೂ ಪ್ರಯಾಣಿಕರನ್ನೇ ಗುರಿಯಾಗಿಸಿ ಮದ್ಯದ ವ್ಯಾಪಾರ ಗಿಟ್ಟಿಸಿಕೊಳ್ಳುವುದನ್ನು ತಡೆಯಲು ಮಹತ್ವದ ನಿರ್ದೇಶನ ಹೊರಬಿದ್ದಿದೆ.

ಸುಪ್ರೀಂಕೋರ್ಟ್​ ಪ್ರಕಾರ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬಳಿ ಇನ್ನುಮುಂದೆ ಹೊಸದಾಗಿ ತಲೆ ಎತ್ತಲಿರುವ ಮದ್ಯದ ಅಂಗಡಿಗಳಿಗೆ ಕಡಿವಾಣ ಬೀಳಲಿದೆ. ಈ ನಿಟ್ಟಿನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನಿರ್ದೇಶನ ವೊಂದನ್ನು ನೀಡಿದೆ.

ಹೆದ್ದಾರಿಗಳ ಬದಿಯಲ್ಲಿ ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡುವುದನ್ನು ನಿಲ್ಲಿಸಿ ಎಂದು ಕೋರ್ಟ್​ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯ ಸೂಚನೆ ನೀಡಿದೆ. ಒಂದು ವೇಳೆ ಸ್ಥಳೀಯಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ 20 ಸಾವಿರಕ್ಕಿಂತ ಜನ ಸಂಖ್ಯೆ ಕಡಿಮೆ ಇರುವ ಪ್ರದೇಶಗಳಲ್ಲಿ ಈಗಿರುವ 500 ಮೀಟರ್​ ಅಂತರವನ್ನು 220 ಮೀಟರ್​ ಅಂತರಕ್ಕಿಳಿಸಿ ಪರವಾನಗಿ ನೀಡಬಹುದು ಎಂದೂ ಹೇಳಿದೆ.

ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳ ಬದಿಯಲ್ಲಿ ಮದ್ಯದಂಗಡಿ ನಡೆಸದಂತೆ ನಿಷೇಧಿಸಿ 2016ರ ಡಿಸೆಂಬರ್​ನಲ್ಲೇ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅಲ್ಲದೆ, ಹೆದ್ದಾರಿ ಬದಿಯಲ್ಲಿ ಮದ್ಯದ ಕುರಿತ ಜಾಹೀರಾತು ಕಾಣಿಸ ಬಾರದು ಎಂದೂ ಹೇಳಿತ್ತು.