Sunday, 15th December 2024

Doctor Murder Case: ಸಂದೀಪ್‌ ಘೋಷ್‌ ಮೇಲೆ‌ ಕೋರ್ಟ್‌ ಆವರಣದಲ್ಲೇ ಉದ್ರಿಕ್ತ ಗುಂಪಿನಿಂದ ಹಲ್ಲೆಗೆ ಯತ್ನ

Kolkata doctor murder

ನವದೆಹಲಿ: ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ(Doctor Murder case) ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಆರ್‌ಜಿ ಕರ್‌ ಮೆಡಿಕಲ್‌ ಕಾಲೇಜಿನ(RG Kar College) ಮಾಜಿ ಪ್ರಾಂಶುಪಾಲ ಡಾ. ಸಂದೀಪ್‌ ಘೋಷ್‌(Dr Sandip Ghosh)ಮೇಲೆ ಕೋರ್ಟ್‌ ಆವರಣದಲ್ಲಿ ಉದ್ರಿಕ್ತ ಗುಂಪಿನಿಂದ ಹಲ್ಲೆಗೆ ಯತ್ನ ನಡೆದಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಘೋಷ್‌ ನಿನ್ನೆ ಕೋಲ್ಕತ್ತಾ ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಕೋರ್ಟ್‌ ಆವರಣದಲ್ಲಿ ಜಮಾಯಿಸಿದ ನೂರಾರು ಜನ ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಆತನನ್ನು ತ‍ಳ್ಳಿ ಹಲ್ಲೆಗೆ ಯತ್ನಿಸಿದರು.

ಆ.9ರಂದು ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣದ ನಂತರ ಘೋಷ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ. ಈ ಪ್ರಕರಣಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದಾದ ಬಳಿಕ ಆತ ತನ್ನ ಅಧಿಕಾರಾವಧಿಯಲ್ಲಿ ಆರ್‌ಜಿ ಕರ್‌ ಕಾಲೇಜಿನಲ್ಲಿ ನಡೆಸಿದ ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಅರೆಸ್ಟ್‌ ಮಾಡಿತ್ತು. ಆತನನ್ನು ನಿನ್ನೆ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಎಂಟು ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿತ್ತು. ಅಲ್ಲದೇ ಪ್ರಕರಣದ ವಿಚಾರಣೆಯನ್ನು ಸೆ.10ಕ್ಕೆ ಮುಂದೂಡಲಾಗಿತ್ತು.

ಕೋರ್ಟ್‌ ವಿಚಾರಣೆ ಮುಗಿಸಿ ಹೊರಬರುತ್ತಿದ್ದಂತೆ ಘೋಷ್‌ ವಿರುದ್ಧ ಮುಗಿಬಿದ್ದ ಜನ ಹಲ್ಲೆಗೆ ಮುಂದಾದರು. ಕೊನೆಗೆ ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ:  https://x.com/SudhanidhiB/status/1830970412551021029

ಆಗಸ್ಟ್ 9 ರಂದು ಆರ್‌ಜಿ  ಕಾರ್ ಆಸ್ಪತ್ರೆಯ ಸ್ನಾತಕೋತ್ತರ ತರಬೇತಿ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಘೋಷ್ ಅವರನ್ನು ಸಿಬಿಐನ ಸಾಲ್ಟ್ ಲೇಕ್ ಕಚೇರಿಯಲ್ಲಿ 15 ನೇ ದಿನವೂ ಪ್ರಶ್ನಿಸಲಾಗಿತ್ತು. ನಂತರ  ಸಿಬಿಐನ ಭ್ರಷ್ಟಾಚಾರ ವಿರೋಧಿ ವಿಭಾಗವನ್ನು ಹೊಂದಿರುವ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್ ಕಚೇರಿಗೆ ಕರೆದೊಯ್ದು  ಅವರನ್ನು ಬಂಧಿಸಲಾಗಿದೆ ಎಂದು ಪ್ರಕಟಿಸಿದೆ.

ಕಲ್ಕತ್ತಾ ಹೈಕೋರ್ಟ್ ನಿರ್ದೇಶನದ ಮೇರೆಗೆ ದಾಖಲಾದ ಎಫ್ಐಆರ್‌ನಲ್ಲಿ , ತನಿಖಾ ಸಂಸ್ಥೆ ಘೋಷ್ ಮತ್ತು ಕೋಲ್ಕತ್ತಾ ಮೂಲದ ಮೂರು ಖಾಸಗಿ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ಆಗಸ್ಟ್ 25 ರಂದು ಘೋಷ್ ಅವರ ಕೋಲ್ಕತ್ತಾದ ಬೆಲಿಯಾಘಾಟಾ ನಿವಾಸದಲ್ಲಿ ಒಂದು ದಿನದ ಶೋಧ ಕಾರ್ಯಾಚರಣೆ ನಡೆಸಿತ್ತು. ಆಗಸ್ಟ್ 9 ರಂದು ಮುಂಜಾನೆ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ  31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆಯೂ ಸಂಸ್ಥೆ ತನಿಖೆ ನಡೆಸುತ್ತಿದೆ.
ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರು ಮತ್ತು ಇತರರ ಅಧಿಕಾರಾವಧಿಯಲ್ಲಿ ನಡೆದ ಹಣಕಾಸು ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಜಾರಿ ನಿರ್ದೇಶನಾಲಯವು  ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ದಾಖಲಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಘ ಸಂದೀಪ್ ಘೋಷ್ ಅವರ ಸದಸ್ಯತ್ವವನ್ನು ಅಮಾನತುಗೊಳಿಸಿತ್ತು.

ಈ ಸುದ್ದಿಯನ್ನೂ ಓದಿ:  Kolkata Doctor Murder Case: ಜೈಲಿನಲ್ಲಿಯೂ ಮೊಂಡಾಟ ಬಿಡದ ಹಂತಕ ಸಂಜಯ್‌ ರಾಯ್‌; ಮೊಟ್ಟೆಯ ಖಾದ್ಯಕ್ಕೆ ಬೇಡಿಕೆ