ನವದೆಹಲಿ: ದೇಶಿಯ ವಿಮಾನಗಳು ಯಾವುದೇ ನಿರ್ಬಂಧಗಳಿಲ್ಲದೇ ಶೇ 100ರಷ್ಟು ಪ್ರಯಾಣಿಕ ರೊಂದಿಗೆ ಸಂಚಾರ ನಡೆಸಲು ಅನುಮತಿ ನೀಡಲಾಗಿದೆ. ಅ.18ರಿಂದ ಈ ಆದೇಶ ಜಾರಿಗೆ ಬರಲಿದೆ.
ಆದರೆ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಕೋವಿಡ್ ಹರಡುವಿಕೆ ತಡೆಯಲು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.
ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಕಳೆದ ವರ್ಷದ ಮೇ ತಿಂಗಳಿನಲ್ಲಿ ವಿಮಾನಗಳ ಹಾರಾಟಕ್ಕೆ ಮಾರ್ಗ ಸೂಚಿ ಪ್ರಕಟಿಸಲಾಗಿತ್ತು. ಶೇ.100ರಷ್ಟು ಪ್ರಯಾಣಿಕರ ಹಾರಾಟಕ್ಕೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿರಲಿಲ್ಲ.
ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರ ದೇಶಿಯ ವಿಮಾನಗಳಲ್ಲಿನ ಪ್ರಯಾಣಿಕರ ಪ್ರಮಾಣವನ್ನು ಶೇ 72.5 ರಿಂದ ಶೇ 85ಕ್ಕೆ ಹೆಚ್ಚಿಸಲು ಅನುಮತಿ ನೀಡಿತ್ತು. ವಿಮಾನ ಸಂಚಾರಕ್ಕೆ ಇರುವ ಬೇಡಿಕೆಯನ್ನು ಪರಿಶೀಲಿಸಿದ ಬಳಿಕ ಹಾರಾಟಕ್ಕೆ ಇದ್ದ ನಿರ್ಬಂಧಗಳನ್ನು ತೆರೆವುಗೊಳಿಸಲಾಗಿದೆ. ಅ.9ರಂದು ಶೇ 71.5 ಪ್ರಯಾಣಿಕರೊಂದಿಗೆ 2340 ವಿಮಾನಗಳು ದೇಶದಲ್ಲಿ ಹಾರಾಟ ನಡೆಸಿವೆ.