Friday, 15th November 2024

Drug Seized: ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ. ಡ್ರಗ್ಸ್ ವಶ, ಎಂಟು ಮಂದಿ ಇರಾನ್‌ ಪ್ರಜೆಗಳು ಅರೆಸ್ಟ್‌

Drug Seized

ಅಹಮದಾಬಾದ್‌: ಗುಪ್ತಚರ ಮಾಹಿತಿ ಆಧಾರದಲ್ಲಿ ಗುಜರಾತ್ ಕರಾವಳಿಯಲ್ಲಿ (Gujarat coast) 700 ಕೆ.ಜಿ. ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದ್ದು (Drug Seized), ಎಂಟು ಮಂದಿ ಇರಾನಿಯನ್ನರನ್ನು (Iranians) ಬಂಧಿಸಲಾಗಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (narcotics control bureau) ತಿಳಿಸಿದೆ.

ಗುಜರಾತ್ ಕರಾವಳಿಯಲ್ಲಿ ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತೀಯ ಪ್ರಾದೇಶಿಕ ಜಲ ಮಾರ್ಗದ ಮೂಲಕ ಸಾಗುತ್ತಿದ್ದ ಬೃಹತ್ ಮಾದಕ ದ್ರವ್ಯ ಸಾಗಣೆಯನ್ನು ಪತ್ತೆ ಹಚ್ಚಿರುವ ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳು (Anti-narcotics agencies) ಸುಮಾರು 700 ಕಿಲೋ ಗ್ರಾಂಗಳಷ್ಟು ಮೆಥಾಂಫೆಟಮೈನ್ ಅನ್ನು ವಶ ಪಡಿಸಿಕೊಂಡಿದ್ದು, ಎಂಟು ಮಂದಿ ಇರಾನ್ ಪ್ರಜೆಗಳನ್ನು ಬಂಧಿಸಿದ್ದಾರೆ.

‘ಸಾಗರ್ ಮಂಥನ್- 4’ ಎಂಬ ಕೋಡ್ ನೇಮ್, ಗುಪ್ತಚರ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಕಡಲಿನಲ್ಲಿ ಗಸ್ತು ನಡೆಸುವ ನೌಕಾಪಡೆಯು ಇದನ್ನು ಗುರುತಿಸಿತ್ತು. ಎನ್‌ಸಿಬಿ, ನೌಕಾಪಡೆ ಮತ್ತು ಗುಜರಾತ್ ಪೊಲೀಸ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಈ ಕಾರ್ಯಾಚರಣೆಯು ಮಾದಕ ದ್ರವ್ಯ ನಿಷೇಧಕ್ಕೆ ಸರ್ಕಾರದ ಬದ್ಧತೆ ಮತ್ತು ಅದನ್ನು ಸಾಧಿಸುವಲ್ಲಿ ನಮ್ಮ ಏಜೆನ್ಸಿಗಳ ನಡುವಿನ ತಡೆರಹಿತ ಸಮನ್ವಯ ಒಂದು ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಮಾದಕದ್ರವ್ಯ ಮುಕ್ತ ಭಾರತಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಅನುಸರಿಸಿ, ನಮ್ಮ ಏಜೆನ್ಸಿಗಳು ಇಂದು ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯನ್ನು ಭೇದಿಸಿ ಗುಜರಾತ್‌ನಲ್ಲಿ ಸುಮಾರು 700 ಕೆ.ಜಿ. ನಿಷೇಧಿತ ಮೆತ್ ಅನ್ನು ವಶಪಡಿಸಿಕೊಂಡಿವೆ ಎಂದು ಅಮಿತ್ ಶಾ ‘ಎಕ್ಸ್’ ನಲ್ಲಿ ಬರೆದಿದ್ದಾರೆ.

ಡ್ರಗ್ ಸಾಗಾಟದ ಹಿಂದಿರುವ ಸಂಪರ್ಕವನ್ನು ಗುರುತಿಸಲು ತನಿಖೆ ನಡೆಸಲಾಗುತ್ತಿದೆ. ಇದಕ್ಕಾಗಿ ವಿದೇಶಿ ಡ್ರಗ್ಸ್ ಲಾ ಎನ್‌ಫೋರ್ಸ್‌ಮೆಂಟ್ ಏಜೆನ್ಸಿಗಳ (ಡಿಎಲ್‌ಇಎ) ಸಹಾಯವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಎನ್‌ಸಿಬಿ ಹೇಳಿದೆ.

ಸಾಗರ ಮಂಥನ್ ಕಾರ್ಯಾಚರಣೆ

ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಯನ್ನು ಎದುರಿಸಲು ಎನ್‌ಸಿಬಿ ತನ್ನ ಕಾರ್ಯಾಚರಣೆ ಶಾಖೆಯ ಅಧಿಕಾರಿಗಳು, ಭಾರತೀಯ ನೌಕಾಪಡೆ, ಭಾರತೀಯ ಕರಾವಳಿ ಕಾವಲು ಪಡೆ, ಎಟಿಎಸ್ ಗುಜರಾತ್ ಪೊಲೀಸ್‌ನ ಕಾರ್ಯಾಚರಣೆ ತಂಡ ಮತ್ತು ಗುಪ್ತಚರ ವಿಭಾಗದ ಅಧಿಕಾರಿಗಳ ತಂಡ ಈ ವರ್ಷದ ಆರಂಭದಲ್ಲಿ ‘ಸಾಗರ್ ಮಂಥನ್’ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.

Viral Video: ನಡುರಸ್ತೆಯಲ್ಲಿ ಟಿವಿ ರಿಪೋರ್ಟರ್‌ ಮೇಲೆ ಅಟ್ಯಾಕ್‌; ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದ ಬಡಪಾಯಿ- ವಿಡಿಯೊ ವೈರಲ್

ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್‌ನ ಸಮನ್ವಯದಲ್ಲಿ ಎನ್‌ಸಿಬಿ ಇಂತಹ ಸಾಗರ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಿದೆ. ಇಲ್ಲಿಯವರೆಗೆ ಸುಮಾರು 3,400 ಕೆ.ಜಿ. ವಿವಿಧ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. 11 ಇರಾನ್, 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ. ವಿಚಾರಣೆಗಾಗಿ ಕಾಯುತ್ತಿರುವ ಎಲ್ಲಾ ಕೈದಿಗಳು ಜೈಲಿನಲ್ಲಿದ್ದಾರೆ.