Friday, 8th November 2024

DY Chandrachud: ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೀಡಿರುವ 10 ಪ್ರಮುಖ ತೀರ್ಪುಗಳಿವು

DY Chandrachud

ನವದೆಹಲಿ: ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ (supreme court) ಎರಡು ವರ್ಷಗಳ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿದ ಮುಖ್ಯ ನ್ಯಾಯಮೂರ್ತಿ (Chief Justice) ಡಿ.ವೈ. ಚಂದ್ರಚೂಡ್ (DY Chandrachud) ಅವರು ಶುಕ್ರವಾರ ತಮ್ಮ ಕೊನೆಯ ಕೆಲಸದ ದಿನವನ್ನು ಮುಗಿಸಿದರು. ಕೆಲಸದ ಕೊನೆಯ ದಿನದಂದು ಅವರು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (Aligarh Muslim University) ಕುರಿತು ಮಹತ್ವದ ತೀರ್ಪುನ್ನು ನೀಡಿದ್ದಾರೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು ಮಹತ್ವದ ತೀರ್ಪು ನೀಡಿದ ಸಂವಿಧಾನ ಪೀಠದ ನೇತೃತ್ವ ವಹಿಸಿದ್ದರು. ಈ ತೀರ್ಪಿನಲ್ಲಿ ವಿಶ್ವವಿದ್ಯಾನಿಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ತೆಗೆದುಹಾಕುವ 1967ರ ತೀರ್ಪನ್ನು ರದ್ದುಗೊಳಿಸಲು ಪೀಠವು ನಿರ್ಧರಿಸಿತು. ಅದನ್ನು ಮತ್ತೆ ನೀಡಬೇಕೆ ಎಂಬುದನ್ನು ಮೂವರು ನ್ಯಾಯಾಧೀಶರ ಪೀಠವು ನಿರ್ಧರಿಸುತ್ತದೆ ಎಂದು ಹೇಳಿದರು.

ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಚಂದ್ರಚೂಡ್ ಅವರ ಕೆಲವು ಪ್ರಮುಖ ತೀರ್ಪುಗಳು ಇಲ್ಲಿವೆ.

DY Chandrachud

ಚುನಾವಣಾ ಬಾಂಡ್ ಪ್ರಕರಣ

ಲೋಕಸಭೆ ಚುನಾವಣೆಗೆ ಮುಂಚಿತವಾಗಿ, ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ರಾಜಕೀಯ ನಿಧಿಗಾಗಿ 2018ರಿಂದ ಜಾರಿಯಲ್ಲಿದ್ದ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತು.

ಈ ಯೋಜನೆಯು ಅಸಾಂವಿಧಾನಿಕ ಮತ್ತು ಅನಿಯಂತ್ರಿತವಾಗಿದೆ. ರಾಜಕೀಯ ಪಕ್ಷಗಳು ಮತ್ತು ದಾನಿಗಳ ನಡುವೆ ಕ್ವಿಡ್ ಪ್ರೊ ಕ್ವೊ ವ್ಯವಸ್ಥೆಗೆ ಕಾರಣವಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ಸಂಜೀವ್ ಖನ್ನಾ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಚುನಾವಣಾ ಬಾಂಡ್‌ಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್‌ಗೆ (ಎಸ್‌ಬಿಐ) ನಿರ್ದೇಶನ ನೀಡಿತು. ಜೊತೆಗೆ ಚುನಾವಣಾ ಬಾಂಡ್ ಮೂಲಕ ಹಣ ಸ್ವೀಕರಿಸಿದ ರಾಜಕೀಯ ಪಕ್ಷಗಳು ವಿವರಗಳನ್ನು ಪ್ರಕಟಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿತು. ಇದರ ಪ್ರಕಾರ ಅದರ ವೆಬ್‌ಸೈಟ್‌ನಲ್ಲಿ 2019ರ ಏಪ್ರಿಲ್ ನಿಂದ ಚುನಾವಣಾ ಬಾಂಡ್‌ಗಳ ಮೂಲಕ ಕೊಡುಗೆಗಳ ಕುರಿತು ಮಾಹಿತಿ ಪ್ರಕಟಿಸಲಾಯಿತು.

ಖಾಸಗಿ ಆಸ್ತಿ ತೀರ್ಪು

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು ಇತ್ತೀಚೆಗೆ ಎಲ್ಲಾ ಖಾಸಗಿ ಒಡೆತನದ ಆಸ್ತಿಗಳು ಸಾಮಾನ್ಯ ಒಳಿತಿಗಾಗಿ ರಾಜ್ಯವು ಸ್ವಾಧೀನಪಡಿಸಿಕೊಳ್ಳಬಹುದಾದ ಸಮುದಾಯ ಸಂಪನ್ಮೂಲಗಳಾಗುವ ಅರ್ಹತೆ ಹೊಂದಿಲ್ಲ ಎಂದು ಹೇಳಿದೆ.

ಇದು ರಾಜ್ಯಗಳ ಕಾನೂನುಗಳನ್ನು ರಕ್ಷಿಸುವ ಸಂವಿಧಾನದ ಆರ್ಟಿಕಲ್ 31ಸಿ ಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ಆರ್ಟಿಕಲ್ 39ಬಿ ಯು ಸಮುದಾಯದ ವಸ್ತು ಸಂಪನ್ಮೂಲಗಳ ಮಾಲೀಕತ್ವ ಮತ್ತು ನಿಯಂತ್ರಣವನ್ನು ಜನ ಸಾಮಾನ್ಯರ ಒಳಿತಿಗಾಗಿ ಉತ್ತಮ ರೀತಿಯಲ್ಲಿ ವಿತರಿಸುವ ಅಧಿಕಾರವನ್ನು ರಾಜ್ಯ ತನ್ನ ಕಾನೂನಿನ ಅಡಿಯಲ್ಲಿ ಹೊಂದಿತ್ತು. ಈ ಕುರಿತು ತೀರ್ಪು ನೀಡಿದ ನ್ಯಾಯಾಲಯವು, ಒಬ್ಬ ವ್ಯಕ್ತಿಯ ಒಡೆತನದ ಪ್ರತಿಯೊಂದು ಸಂಪನ್ಮೂಲವನ್ನು ಸಮುದಾಯದ ಸಂಪನ್ಮೂಲವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

ಆರ್ಟಿಕಲ್ 370

2023ರ ಡಿಸೆಂಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370ನೇ ವಿಧಿಯನ್ನು ರದ್ದುಗೊಳಿಸುವ ಕಾನೂನನ್ನು ಎತ್ತಿ ಹಿಡಿಯಿತು.

ಲಡಾಖ್ ಸೇರಿದಂತೆ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾದ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವವನ್ನು ಮರುಸ್ಥಾಪನೆ ಸಾಧ್ಯವಾದಷ್ಟು ಬೇಗ ನಡೆಯಲಿದೆ ಎಂದು ನ್ಯಾಯಾಲಯ ಹೇಳಿತ್ತು.

ಸಲಿಂಗ ವಿವಾಹ

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು 2023ರ ಅಕ್ಟೋಬರ್‌ನಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿತು.

ಪೌರತ್ವ ಕಾಯಿದೆ

ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ಅಸ್ಸಾಂ ಒಪ್ಪಂದವನ್ನು ಗುರುತಿಸುವ ಪ್ರಮುಖ ಪೌರತ್ವ ನಿಯಮದ ಸಿಂಧುತ್ವವನ್ನು ಎತ್ತಿಹಿಡಿದಿದೆ. 1971ಕ್ಕಿಂತ ಮೊದಲು ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶದ ನಿರಾಶ್ರಿತರಿಗೆ ಪೌರತ್ವವನ್ನು ನೀಡಿತು.

ಕಾರಾಗೃಹಗಳಲ್ಲಿ ಜಾತಿ ಆಧಾರಿತ ತಾರತಮ್ಯ

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠವು ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿತು. 10 ರಾಜ್ಯಗಳ ಜೈಲು ಕೈಪಿಡಿ ನಿಯಮಗಳನ್ನು “ಅಸಂವಿಧಾನಿಕ” ಎಂದು ಪರಿಗಣಿಸಿತು. ಗೌರವದಿಂದ ಬದುಕುವ ಹಕ್ಕು ಜೈಲಿನಲ್ಲಿರುವವರಿಗೂ ವಿಸ್ತರಿಸುತ್ತದೆ ಎಂದು ಪೀಠ ಹೇಳಿತು. ಅಲ್ಲದೇ ಮೂರು ತಿಂಗಳೊಳಗೆ ತಮ್ಮ ಜೈಲು ಕೈಪಿಡಿಗಳು ಮತ್ತು ಕಾನೂನುಗಳನ್ನು ತಿದ್ದುಪಡಿ ಮಾಡಿ ಮತ್ತು ಅನುಸರಣೆ ವರದಿಗಳನ್ನು ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ಸೂಚಿಸಿತು.

ಯುಪಿ ಮದ್ರಸಾ ಕಾನೂನು

ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಉತ್ತರ ಪ್ರದೇಶದ ಮದರಸಾಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ 2004ರ ಕಾನೂನಿನ ಸಿಂಧುತ್ವವನ್ನು ಎತ್ತಿ ಹಿಡಿದಿದೆ. ರಾಜ್ಯವು ಮದರಸ ಶಿಕ್ಷಣದ ಗುಣಮಟ್ಟವನ್ನು ನಿಯಂತ್ರಿಸಬಹುದು. ಆದರೆ ಮದರಸಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ನೀಟ್-ಯುಜಿ ಮರು ಪರೀಕ್ಷೆ

ಪರೀಕ್ಷೆ ಪತ್ರಿಕೆ ಸೋರಿಕೆ ಆರೋಪದ ಕಾರಣ ಸಲ್ಲಿಸಲಾದ ದೂರನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ 2024ರ ನೀಟ್ ಯುಜಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರಾಕರಿಸಿತು.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠ, ಮರು ಪರೀಕ್ಷೆಗೆ ಆದೇಶಿಸಲು ದಾಖಲೆಯಲ್ಲಿ ಸಾಕಷ್ಟು ಸಾಮಗ್ರಿಗಳು ಲಭ್ಯವಿಲ್ಲ ಎಂದು ಹೇಳಿದರು. ಆದರೆ ಅಕ್ರಮವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿತ್ತು.

ಸಂಸದರು ಮತ್ತು ಶಾಸಕರಿಗೆ ವಿನಾಯಿತಿ ಸಾಧ್ಯವಿಲ್ಲ

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಮಾರ್ಚ್‌ನಲ್ಲಿ ಸಂಸದರು ಅಥವಾ ಶಾಸಕರು ಮತಕ್ಕಾಗಿ ಅಥವಾ ಶಾಸಕಾಂಗದಲ್ಲಿ ಭಾಷಣಕ್ಕಾಗಿ ಲಂಚ ಪಡೆದ ಆರೋಪವಿದ್ದರೆ ಅವರು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು.

Tirupati: ತಿರುಪತಿಗೆ ಪ್ರತ್ಯೇಕ ರಾಜ್ಯ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌!

ಬಾಲ್ಯ ವಿವಾಹ

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಪೀಠವು ಅಕ್ಟೋಬರ್‌ನಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ 2006ರ ಪರಿಣಾಮಕಾರಿ ಅನುಷ್ಠಾನಕ್ಕೆ ಹಲವು ನಿರ್ದೇಶನಗಳನ್ನು ನೀಡಿತು.

ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಿಲ್ಲಾ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ಪೀಠವು ಆದೇಶಿಸಿತು.