Friday, 22nd November 2024

DY Chandrachud: ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಕೇಳಿದ ಮರಣದಂಡನೆ ಪ್ರಶ್ನೆಗೆ ಎಐ ಉತ್ತರ ಹೇಗಿತ್ತು? ವಿಡಿಯೊ ನೋಡಿ

DY Chandrachud

ದೆಹಲಿ: ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯ ಮೂರ್ತಿ ಡಿ.ವೈ. ಚಂದ್ರಚೂಡ (DY Chandrachud) ಸದಾ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಕೃತಕ ಬುದ್ಧಿಮತ್ತೆ (Artificial Intelligence) ವಕೀಲರ ಜತೆ ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ನ್ಯಾಯಾಂಗ ವಸ್ತುಸಂಗ್ರಹಾಲಯ ಮತ್ತು ಆರ್ಕೈವ್ ಉದ್ಘಾಟನಾ ಸಮಾರಂಭದಲ್ಲಿ (National Judicial Museum and Archive) ಈ ಸಂವಾದ ನಡೆದಿದೆ.

ಎಐ ಸಾಮಾರ್ಥ್ಯವನ್ನು ನ್ಯಾಯಮೂರ್ತಿ ಪರೀಕ್ಷೆ ನಡೆಸಿದ್ದು, ʼʼಭಾರತದಲ್ಲಿ ಮರಣದಂಡನೆ ಸಾಂವಿಧಾನಿಕವೇ?ʼʼ ಎಂದು ಕೃತಕ ಬುದ್ಧಿಮತ್ತೆಯ ವಕೀಲರ ಬಳಿ ಕೇಳಿದ್ದಾರೆ.  ಟೈ ಮತ್ತು ಕಪ್ಪು ಕೋಟ್ ಧರಿಸಿದ ಎಐ ವಕೀಲ ಈ ಪ್ರಶ್ನೆಗೆ ಉತ್ತರಿಸಿದ್ದು, ʼʼಹೌದು, ಮರಣದಂಡನೆಯು ಭಾರತದಲ್ಲಿ ಸಾಂವಿಧಾನಿಕವಾಗಿದೆ. ಆದರೆ ಸುಪ್ರೀಂ ಕೋರ್ಟ್‌ ನಿರ್ಧರಿಸಿದ ಅಪರೂಪದಲ್ಲಿ ಅಪರೂಪ ಎನ್ನುವಂತ ಪ್ರಕರಣಗಳಿಗೆ ಮಾತ್ರ ಮರಣದಂಡನೆಯನ್ನು ವಿಧಿಸಲಾಗುತ್ತದೆʼʼ ಎಂದು ಹೇಳಿದೆ. ಎಐ ಉತ್ತರಿಸಿದ ರೀತಿಗೆ ಮುಖ್ಯ ನ್ಯಾಯಮೂರ್ತಿ ಖುಷಿ ವ್ಯಕ್ತಪಡಿಸಿದ್ದಾರೆ. ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಕೂಡ ಉಪಸ್ಥಿತರಿದ್ದರು.

ನಂತರ ಮಾತನಾಡಿದ ಡಿ.ವೈ. ಚಂದ್ರಚೂಡ ಅವರು ʼʼನೂತನ ವಸ್ತುಸಂಗ್ರಹಾಲಯವು ಸುಪ್ರೀಂ ಕೋರ್ಟ್‌ನ ನೀತಿಯ ಪ್ರತಿಬಿಂಬವಾಗಿದೆ ಹಾಗೂ ದೇಶದ ಮಹತ್ವವನ್ನು ತಿಳಿಸುತ್ತದೆ. ದೇಶದ ಯುವಜನತೆಗೆ ನ್ಯಾಯಾಲಯದ ಬಗ್ಗೆ ತಿಳಿಯಬೇಕು. ಕಾನೂನಿನ ಬಗ್ಗೆ ಅರಿವು ಮೂಡುವಂತೆ ಮಾಡಬೇಕುʼʼ ಎಂದರು. ʼʼವಸ್ತುಸಂಗ್ರಹಾಲಯವು ಕೇವಲ ಶಾಲಾ ಕಾಲೇಜು ಮಕ್ಕಳಿಗಲ್ಲ. ಜನಸಾಮಾನ್ಯರು, ವಕೀಲರು, ನ್ಯಾಯಾಧೀಶರು ಸೇರಿದಂತೆ ಎಲ್ಲರೂ ಬರಬೇಕೆಂದು ನಾನು ವಿನಂತಿಸಿಕೊಳ್ಳುತ್ತೇನೆʼʼ ಎಂದು ಹೇಳಿದರು.

ಇದನ್ನೂ ಓದಿ : Supreme Court: ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ಸರ್ಕಾರಿಗಳಿಗಿಲ್ಲ: ಸುಪ್ರೀಂ ಮಹತ್ವದ ತೀರ್ಪು

ʼʼಈ ವಸ್ತು ಸಂಗ್ರಹಾಲಯ ಸ್ಥಾಪಿಸಲು ಹಲವಾರು ಜನರು ಸಹಾಯ ಮಾಡಿದ್ದಾರೆ. ಮುಂದಿನ ವಾರದಲ್ಲಿ ನ್ಯಾಯ ಮೂರ್ತಿ ಸಂಜೀವ್ ಖನ್ನಾ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಲಿದ್ದಾರೆ. ಅವರು ಇದನ್ನು ಮತ್ತಷ್ಟು ಅಭಿವೃದ್ದಿ ಮಾಡುತ್ತಾರೆ ಎಂಬ ನಂಬಿಕೆ ಇದೆʼʼ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿರಿಯ ವಕೀಲ ಕಪಿಲ್ ಸಿಬಲ್ ನೇತೃತ್ವದ ಉನ್ನತ ನ್ಯಾಯಾಲಯದ ವಕೀಲರ ಸಂಘ ಈ ವಸ್ತು ಸಂಗ್ರಹಾಲಯ ತೆರೆಯಲು ವಿರೋಧಿಸಿತ್ತು.  ಮ್ಯೂಸಿಯಂ ನಿರ್ಮಾಣವಾಗಿರುವ ಸ್ಥಳದಲ್ಲಿಯೇ ಗ್ರಂಥಾಲಯ ಮತ್ತು ವಿಶ್ರಾಂತಿ ಕೊಠಡಿ ಬೇಕು ಎಂದು ಅವರು ಒತ್ತಾಯಿಸಿದ್ದರು.