Monday, 25th November 2024

ಏಕತಾ ಪ್ರತಿಮೆ ಬಳಿ 3.1 ತೀವ್ರತೆ ಭೂಕಂಪನ

ಅಹಮದಾಬಾದ್: ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾ ಗ್ರಾಮದ ಬಳಿ 3.1 ತೀವ್ರ ತೆಯ ಭೂಕಂಪನ ದಾಖಲಾಗಿದೆ. ಆದರೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕೆವಾಡಿಯಾ ಗ್ರಾಮದ ಬಳಿ 182 ಮೀಟರ್ ಎತ್ತರದ ಏಕತಾ ಪ್ರತಿಮೆಯಿದೆ. ಸೋಮವಾರ ರಾತ್ರಿ ಕಂಪನ ದಾಖಲಾಗಿದೆ. ಭೂ ಕಂಪಗಳು ಮತ್ತು ಚಂಡಮಾರುತಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾದ ಏಕತಾ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಮಾರಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಹುಲ್ ಪಟೇಲ್ ಹೇಳಿದ್ದಾರೆ.

ಕಂಪನದ ಕೇಂದ್ರಬಿಂದು ಕೆವಾಡಿಯಾದಿಂದ ಪೂರ್ವ-ಆಗ್ನೇಯಕ್ಕೆ 12 ಕಿಮೀ ದೂರದಲ್ಲಿದೆ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ಗುಜರಾತ್‌ನ ಕೆವಾಡಿಯಾದಿಂದ ಪೂರ್ವ-ಆಗ್ನೇಯಕ್ಕೆ 12 ಕಿಮೀ ದೂರದಲ್ಲಿ 12.7 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಐಎಸ್‌ಆರ್‌ ತಿಳಿಸಿದೆ. ಕಂಪನದಿಂದಾಗಿ ಈ ಪ್ರದೇಶದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ವರದಿಯಾಗಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.