Sunday, 15th December 2024

ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ

ವದೆಹಲಿ: ಕೇಂದ್ರ ಚುನಾವಣಾ ಆಯೋಗ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ.

ಬುಧವಾರ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನ ಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದರು.

ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆಯ ಅವಧಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22ರಂದು ಅಂತ್ಯಗೊಳ್ಳಲಿದೆ ಎಂದು ಹೇಳಿದರು.

ತ್ರಿಪುರ ರಾಜ್ಯದಲ್ಲಿ ಫೆಬ್ರವರಿ 16, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ. ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 2ರಂದು ಪ್ರಕಟವಾಗಲಿದೆ.

ಆಯೋಗದ ಮಾಹಿತಿ ಪ್ರಕಾರ ಮೂರು ರಾಜ್ಯಗಳ ಒಟ್ಟು ಮತದಾರರ ಸಂಖ್ಯೆ 62.8 ಲಕ್ಷ ಆಗಿದೆ. ನಾಗಾಲ್ಯಾಂಡ್‌ ಒಟ್ಟು ವಿಧಾನಸಭಾ ಕ್ಷೇತ್ರಗಳು 60. ಒಟ್ಟು ಮತದಾರರು 13,09,651 ಆಗಿದೆ. ಇವರಲ್ಲಿ ಪುರುಷರು 6,53,616, ಮಹಿಳೆಯರು 6,56,035. ಮೊದಲ ಬಾರಿಯ ಮತದಾರರು 30,049.

ಮೇಘಾಲಯ ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 60. ಒಟ್ಟು ಮತದಾರರು 21,61,129. ಪುರುಷರು 10,68,801, ಮಹಿಳೆ ಯರು 10,92,396. ಹೊಸ ಮತದಾರರು 81,443.

ತ್ರಿಪುರ ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 60. ಒಟ್ಟು ಮತದಾರರು 28,13,478. ಪುರುಷರು 14,14,576. ಮಹಿಳೆಯರು 13,98,825. ಹೊಸ ಮತದಾರರು 65,044.

ತ್ರಿಪುರ ರಾಜ್ಯ ತ್ರಿಪುರ ರಾಜ್ಯದಲ್ಲಿ 60 ವಿಧಾನಸಭಾ ಕ್ಷೇತ್ರಗಳಿವೆ. 2018ರ ಚುನಾವಣೆಯಲ್ಲಿ ಬಿಜೆಪಿ 33, ಐಪಿಎಫ್‌ಟಿ 4, ಸಿಪಿಐ (ಎಂ) 15, ಕಾಂಗ್ರೆಸ್ 1 ಸ್ಥಾನದಲ್ಲಿ ಜಯಗಳಿಸಿತ್ತು. ಡಾ. ಮಾಣಿಕ್ ಷಾ ಸದ್ಯ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ.

ಮೇಘಾಲಯ ರಾಜ್ಯ ಮೇಘಾಲಯ ರಾಜ್ಯದಲ್ಲಿಯೂ 60 ವಿಧಾನಸಭಾ ಕ್ಷೇತ್ರಗಳಿವೆ. ಎನ್‌ಪಿಪಿ ಪಕ್ಷ ಚುನಾವಣೆಯಲ್ಲಿ 20 ಸ್ಥಾನಗಳಲ್ಲಿ ಜಯಗಳಿಸಿತ್ತು. ರಾಜ್ಯದ ಮುಖ್ಯಮಂತ್ರಿ ಕಾರ್ನಾಡ್ ಸಂಗ್ಮಾ. ಟಿಎಂಸಿ ರಾಜ್ಯದ ಪ್ರತಿಪಕ್ಷವಾಗಿದ್ದು 9 ಸ್ಥಾನದಲ್ಲಿ ಜಯಗಳಿಸಿದೆ.

ನಾಗಾಲ್ಯಾಂಡ್ ರಾಜ್ಯ 60 ವಿಧಾನಸಭೆಯ ನಾಗಾಲ್ಯಾಂಡ್‌ನಲ್ಲಿ ಯುಡಿಎ ಮೈತ್ರಿಕೂಟದ ಸರ್ಕಾರವಿದೆ. ಎನ್‌ಡಿಪಿಪಿ, ಬಿಜೆಪಿ, ಎನ್‌ಪಿಎಫ್ ಈ ಮೈತ್ರಿಕೂಟದಲ್ಲಿವೆ. ಎನ್‌ಡಿಪಿಪಿ ಪಕ್ಷದ ನೆಯ್‌ಫಿಯ ರಿಯೊ ಮುಖ್ಯಮಂತ್ರಿ. ರಾಜ್ಯದಲ್ಲಿ ಪ್ರತಿಪಕ್ಷವೇ ಇಲ್ಲ.