Thursday, 24th October 2024

ಜಾರ್ಖಂಡ್‌ನ ಅಕ್ರಮ ಗಣಿಗಾರಿಕೆ, ಶೆಲ್ ಕಂಪನಿಗಳಿಗೆ ’ಇಡಿ’ ಬಿಸಿ

ರಾಂಚಿ: ಜಾರಿ ನಿರ್ದೇಶನಾಲಯ ಶುಕ್ರವಾರ ಜಾರ್ಖಂಡ್‌ನ ಅಕ್ರಮ ಗಣಿಗಾರಿಕೆ ಮತ್ತು ಶೆಲ್ ಕಂಪನಿ ಗಳಿಗೆ ಸೇರಿದ 18 ಪ್ರದೇಶಗಳ ಮೇಲೆ ದಾಳಿ ನಡೆಸಿದೆ.

ಜಾರ್ಖಂಡ್, ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಎನ್‌ಸಿಆರ್ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ತಂಡವು ಗುರುವಾರ ಸಂಜೆ ದೆಹಲಿಯಿಂದ 18 ಪ್ರದೇಶಗಳಿಗೆ ತಲುಪಿದ್ದು, ಬೆಳಿಗ್ಗೆಯೇ ದಾಳಿ ನಡೆಸಲು ಆರಂಭಿಸಿತ್ತು ಎನ್ನಲಾಗಿದೆ.

ರಾಂಚಿಯಲ್ಲಿರುವ ಗಣಿಗಾರಿಕೆ ಕಾರ್ಯದರ್ಶಿ ಪೂಜಾ ಸಿಂಘಾಲ್ ಅವರ ಅಧಿಕೃತ ನಿವಾಸದಲ್ಲೂ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕಂಕೆ ರಸ್ತೆಯಲ್ಲಿರುವ ಪಂಚಾವತಿ ರೆಸಿಡೆನ್ಸ್, ಲಾಲ್‌ಪುರದ ಹರಿಯೋಮ್ ಟವರ್, ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್ ಅವರ ಅಧಿಕೃತ ನಿವಾಸ ಮತ್ತು ಪೂಜಾ ಅವರ ಪತಿಗೆ ಸೇರಿದ ರಾಂಚಿಯ ಬರಿಯಾತು ರಸ್ತೆಯಲ್ಲಿರುವ ಪಲ್ಸ್ ಆಸ್ಪತ್ರೆ ಮೇಲೆ ದಾಳಿ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.