Friday, 22nd November 2024

Edible Oils: ಖಾದ್ಯ ತೈಲಗಳ ಆಮದು ಸುಂಕ ಹೆಚ್ಚಿಸಿದ ಕೇಂದ್ರ

Edible Oils

ನವದೆಹಲಿ: ವಿಶ್ವದ ಅತಿದೊಡ್ಡ ಖಾದ್ಯ ತೈಲ (Edible Oils) ಆಮದುದಾರ ದೇಶ ಎನಿಸಿಕೊಂಡಿರುವ ಭಾರತ ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು ತೆರಿಗೆ (Basic import tax)ಯನ್ನು ಶೇ. 20ರಷ್ಟು ಹೆಚ್ಚಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಶುಕ್ರವಾರ ಮಾಹಿತಿ ನೀಡಿದೆ. ಸ್ಥಳೀಯ ರೈತರನ್ನು ಬೆಂಬಲಿಸಲು ಈ ಕ್ರಮ ಕೈಗೊಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಕ್ರಮದಿಂದ ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆ ಬೆಲೆ ಹೆಚ್ಚಿ ಬೇಡಿಕೆ ಕಡಿಮೆಯಾಗುತ್ತದೆ. ಕ್ರಮೇಣ ತಾಳೆ ಎಣ್ಣೆ, ಸೋಯಾಬೀನ್‌ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದು ಪ್ರಮಾಣ ಕ್ಷೀಣಿಸಿ ಸ್ಥಳೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸೆಪ್ಟೆಂಬರ್ 14ರಿಂದ ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್‌ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲೆ ಶೇ. 20ರಷ್ಟು ಮೂಲ ಕಸ್ಟಮ್ಸ್ ಸುಂಕವನ್ನು ವಿಧಿಸಲಾಗುತ್ತಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಈ ಮೂರು ತೈಲಗಳ ಮೇಲಿನ ಒಟ್ಟು ಆಮದು ಸುಂಕವನ್ನು ಶೇ. 5.5ರಿಂದ ಶೇ. 27.5ಕ್ಕೆ ಹೆಚ್ಚಿಸಲಾಗಿದೆ.

ಭಾರತ ಶೇ. 70 ರಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ತಾಳೆ ಎಣ್ಣೆಯನ್ನು ಪ್ರಮುಖವಾಗಿ ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಿಂದ ಮತ್ತು ಸೋಯಾಬೀನ್‌ ಎಣ್ಣೆ ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ಅರ್ಜೆಂಟೀನಾ, ಬ್ರೆಜಿಲ್‌, ರಷ್ಯಾ ಮತ್ತು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತಿದೆ. ಈ ವರ್ಷದ ಕೊನೆಯಲ್ಲಿ ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಸೋಯಾಬೀನ್ ಬೆಳೆಗಾರರಿಗೆ ಸಹಾಯ ಮಾಡಲು ಆಮದು ತೆರಿಗೆಯನ್ನು ಹೆಚ್ಚಿಸಲು ಭಾರತ ನಿರ್ಧರಿಸಿದೆ ಎಂದು ಎಂದು ಆಗಸ್ಟ್ ಕೊನೆಯಲ್ಲಿ ಸುದ್ದುಸಂಸ್ಥೆ ರಾಯಿಟರ್ಸ್ ವರದಿ ಮಾಡಿತ್ತು.

ದೇಶದಲ್ಲಿ ಈ ಹಿಂದೆ 12.50 ಲಕ್ಷ ಎಕರೆ ಪ್ರದೇಶದಲ್ಲಿ ಎಣ್ಣೆ ಕಾಳು ಬೆಳೆಯಲಾಗುತ್ತಿತ್ತು. ಈಗ ಎಣ್ಣೆ ಕಾಳುಗಳ ಉತ್ಪಾದನೆ 3.50 ಲಕ್ಷ ಎಕರೆಗೆ ಕುಸಿದಿದೆ. ದೇಶದ ಒಟ್ಟು ಖಾದ್ಯ ತೈಲ ಬೇಡಿಕೆಯಲ್ಲಿ ಶೇ. 30ರಷ್ಟು ಮಾತ್ರ ನಮ್ಮಲ್ಲಿ ಉತ್ಪಾದನೆಯಾಗುತ್ತಿದೆ.

ಈ ಸುದ್ದಿಯನ್ನೂ ಓದಿ: LIC: ರೈಲ್ವೆಯ ಐಆರ್‌ಸಿಟಿಸಿಯಲ್ಲಿ ಹೂಡಿಕೆ ಹೆಚ್ಚಿಸಿದ ಎಲ್‌ಐಸಿ