Friday, 22nd November 2024

ಮಾಜಿ ಐಎನ್‍ಎಲ್‍ಡಿ ಶಾಸಕರಿಗೆ ’ಇಡಿ’ ದಾಳಿ ಬಿಸಿ

ಚಂಡೀಗಢ: ಮಾಜಿ ಐಎನ್‍ಎಲ್‍ಡಿ ಶಾಸಕ ದಿಲ್‍ಬಾಗ್ ಸಿಂಗ್ ಮತ್ತು ಅವರ ಸಹಚರರ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸಿದ ಶೋಧದ ವೇಳೆ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು, ಸುಮಾರು 300 ಕಾಟ್ರಿಡ್ಜ್ ಗಳು, 5 ಕೋಟಿ ರೂಪಾಯಿ ನಗದು ಮತ್ತು 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ಕೇಂದ್ರೀಯ ಸಂಸ್ಥೆ ಮಾಜಿ ಶಾಸಕ ಮತ್ತು ಸೋನಿಪತ್‍ನ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ವಿರುದ್ಧ ದಾಳಿ ನಡೆಸಿತ್ತು.

ಸಿಂಗ್ ಅವರಿಗೆ ಸಂಬಂಧಿಸಿದ ನಿವೇಶನಗಳಿಂದ ಸುಮಾರು 5 ಕೋಟಿ ರೂಪಾಯಿ ನಗದು, ಅಕ್ರಮ ವಿದೇಶಿ ನಿರ್ಮಿತ ಆಯುಧಗಳು, ಸುಮಾರು 300 ಕಾಟ್ರ್ರಿಡ್ಜ್‍ಗಳು, 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು, 4ರಿಂದ 5 ಕೆಜಿ ಚಿನ್ನ ಮತ್ತು ಭಾರತ ಮತ್ತು ವಿದೇಶಗಳಲ್ಲಿನ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವೆಡೆ ಶೋಧ ಕಾರ್ಯ ಮುಂದುವರಿದಿದೆ.

ಯಮುನಾ ನಗರ, ಸೋನಿಪತ್, ಮೊಹಾಲಿ, ಫರಿದಾಬಾದ್, ಚಂಡೀಗಢ ಮತ್ತು ಕರ್ನಾಲ್‍ನಲ್ಲಿ ಇಬ್ಬರು ರಾಜಕಾರಣಿಗಳು ಮತ್ತು ಸಂಬಂಧಿತ ಘಟಕಗಳ ಸುಮಾರು 20 ಸ್ಥಳಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಯ ನಿಬಂಧನೆಗಳ ಅಡಿಯಲ್ಲಿ ಈ ದಾಳಿಗಳನ್ನು ನಡೆಸಲಾಗಿತ್ತು. ಸಿಂಗ್ ಅವರು ಯಮುನಾನಗರದ ಭಾರತೀಯ ರಾಷ್ಟ್ರೀಯ ಲೋಕದಳದ ಮಾಜಿ ಶಾಸಕರಾಗಿದ್ದಾರೆ.