Wednesday, 30th October 2024

Elcid investments : 3 ರೂ.ಗಳ ಷೇರಿನ ದರ ಒಂದೇ ದಿನಕ್ಕೆ 2.36 ಲಕ್ಷ ರೂ.; ಷೇರುದಾರರಿಗೆ ಬಂಪರ್‌ ಲಾಭ!

ಕೇಶವ ಪ್ರಸಾದ್‌ ಬಿ.

ಮುಂಬಯಿ: ಕೇವಲ 3.50 ರೂ. ಅಗ್ಗದ ದರದಲ್ಲಿ ಸಿಗುತ್ತಿದ್ದ ಒಂದು ಷೇರು, ಇದೀಗ ಮುಂಬಯಿ ಷೇರು ಮಾರುಕಟ್ಟೆಯ ಇತಿಹಾಸದಲ್ಲಿಯೇ (Elcid investments) ವಿಸ್ಮಯಕಾರಿ ದಾಖಲೆ ಸೃಷ್ಟಿಸಿದೆ. ಟೈರ್‌ ಉತ್ಪಾದಕ ಎಂಆರ್‌ಎಫ್‌ ಅನ್ನೂ ಹಿಂದಿಕ್ಕಿ ಭಾರತದ ಅತ್ಯಂತ ದುಬಾರಿ ಷೇರು ಎಂಬ ದಾಖಲೆಗೆ ಪಾತ್ರವಾಗಿದೆ. ಅದೂ ಒಂದೇ ದಿನದಲ್ಲಿ! ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಇಂಥ ದಾಖಲೆ ಇದೇ ಮೊದಲು. ಎಲ್ಸಿಡ್‌ ಇನ್ವೆಸ್ಟ್‌ಮೆಂಟ್ಸ್‌ (Elcid Investments) ಎಂಬ ಹಣಕಾಸು ವಲಯದ ಹೋಲ್ಡಿಂಗ್‌ ಕಂಪನಿಯ ಷೇರು ದರ ಅಕ್ಟೋಬರ್‌ 29ರಂದು ಒಂದೇ ದಿನ 66,92,535% ಏರಿಕೆ ದಾಖಲಿಸಿತು. ಅಂದರೆ ಕೇವಲ 3.53 ರೂ.ನಷ್ಟಿದ್ದ ಷೇರಿನ ದರ ದಾಖಲೆಯ 2,36,250 ರೂ.ಗೆ ಜಿಗಿಯಿತು!

ಈ ಅನೂಹ್ಯ ಏರಿಕೆಯ ಪರಿಣಾಮ ಭಾರತದ ಅತ್ಯಂತ ದುಬಾರಿ ಷೇರು ಎನ್ನಿಸಿದ್ದ ಎಂಆರ್‌ಎಫ್‌ ಅನ್ನೂ (MRF) ಎಲ್ಸಿಡ್‌ ಇನ್ವೆಸ್ಟ್‌ಮೆಂಟ್ಸ್‌ ಹಿಂದಿಕ್ಕಿತು. ಎಂಆರ್‌ಎಫ್‌ ಷೇರಿನ ದರ 1,22,576 ರೂ.ನಷ್ಟಿತ್ತು. ಒಂದು ವೇಳೆ ನೀವು ಈ ಷೇರಿನಲ್ಲಿ ಕೆಲವೇ ತಿಂಗಳ ಹಿಂದೆ 10,000 ರೂ. ಹೂಡಿಕೆ ಮಾಡಿರುತ್ತಿದ್ದರೆ, ಈಗ 67 ಕೋಟಿ ರೂ.ಗೆ ಜಿಗಿದಿರುತ್ತಿತ್ತು!

ಹಾಗಾದರೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಯಾಗಿರುವ ಎಲ್ಸಿಡ್‌ ಇನ್ವೆಸ್ಟ್‌ಮೆಂಟ್ಸ್‌ ಷೇರು ದರ ಈ ರೀತಿ ಜಿಗಿದಿರುವುದೇಕೆ? ಇದಕ್ಕೆ ಕಾರಣವೂ ಇದೆ. ಬಾಂಬೆ ಸ್ಟಾಕ್ಸ್‌ ಎಕ್ಸ್‌ಚೇಂಜ್‌ (BSE) ಹೋಲ್ಡಿಂಗ್ ಕಂಪನಿಗಳ ಷೇರು ದರವನ್ನು‌ ಕಂಡುಕೊಳ್ಳಲು ನಡೆಸಿದ ಸ್ಪೆಶಲ್‌ ಕಾಲ್‌ ಆಕ್ಷನ್‌ನಲ್ಲಿ (Special call aution) ಎಲ್ಸಿಡ್‌ ಷೇರಿನ ದರ 2 ಲಕ್ಷದ 25 ಸಾವಿರ ರೂ.ಗೆ ಏರಿಕೆಯಾಯಿತು. ವಿಶೇಷವೇನೆಂದರೆ, 2.25 ಲಕ್ಷ ರೂ.ಗಳೂ ಹೆಚ್ಚಲ್ಲವಂತೆ. ಕಂಪನಿಯ ಬುಕ್‌ ವಾಲ್ಯೂ 5,85,225 ರೂ.ಗೆ ಏರಿಕೆಯಾಗಿದೆ. ಅದಕ್ಕೆ ಹೋಲಿಸಿದರೆ 2.25 ಲಕ್ಷ ರೂ.ಗಳೂ ಕಡಿಮೆ.

ಹಾಗಾದರೆ ಏನಿದು ಸ್ಪೆಶಲ್‌ ಕಾಲ್‌ ಆಕ್ಷನ್?‌

ಮಾರುಕಟ್ಟೆ ನಿಯಂತ್ರಕ ಸೆಬಿಯು ಲಿಸ್ಟಡ್‌ ಇನ್ವೆಸ್ಟ್‌ಮೆಂಟ್‌ ಕಂಪನಿಗಳು ಮತ್ತು ಇನ್ವೆಸ್ಟ್‌ಮೆಂಟ್‌ ಹೋಲ್ಡಿಂಗ್‌ ಕಂಪನಿಗಳ ಷೇರು ದರವನ್ನು ನಿರ್ಧರಿಸಲು ಸಹಕಾರಿಯಾಗುವಂತೆ ಈ ವಿಶೇಷ ಟ್ರೇಡಿಂಗ್‌ ವ್ಯವಸ್ಥೆಯನ್ನು ಕಲ್ಪಿಸುತ್ತದೆ. ಈ ಅವಧಿಯಲ್ಲಿ ಷೇರಿಗೆ ಯಾವುದೇ ದರ ಶ್ರೇಣಿಯನ್ನು ನಿಗದಿಪಡಿಸಿರುವುದಿಲ್ಲ. (Price bands) ಯಾವುದೇ ಅಪ್ಪರ್‌ ಸರ್ಕ್ಯೂಟ್‌ ಅಥವಾ ಲೋವರ್‌ ಸರ್ಕ್ಯೂಟ್‌ ಇರುವುದಿಲ್ಲ. ಇಂಥ ಸ್ಪೆಶಲ್‌ ಕಾಲ್‌ ಆಕ್ಷನ್‌ ಬಗ್ಗೆ ಸ್ಟಾಕ್‌ ಎಕ್ಸ್‌ಚೇಂಜ್‌ಗಳು ಮಾರುಕಟ್ಟೆಗೆ 14 ದಿನ ಮುಂಚಿತವಾಗಿ ತಿಳಿಸಬೇಕಾಗುತ್ತದೆ. ಮುಖ್ಯವಾಗಿ ಹೋಲ್ಡಿಂಗ್‌ ಕಂಪನಿಗಳ ಷೇರುಗಳನ್ನು ನಿಗದಿಪಡಿಸಲು ಇಂಥ ವಿಶೇಷ ಟ್ರೇಡಿಂಗ್‌ ವ್ಯವಸ್ಥೆ ಅನುಕೂಲಕರ. ಭಾರತದ ಷೇರು ಮಾರುಕಟ್ಟೆಯಲ್ಲಿ 70ಕ್ಕೂ ಹೆಚ್ಚು ಹೋಲ್ಡಿಂಗ್‌ ಕಂಪನಿಗಳಿವೆ. ಹೋಲ್ಡಿಂಗ್‌ ಕಂಪನಿ ಎಂದರೆ ಇತರ ಕಂಪನಿಗಳ ನಿಯಂತ್ರಣಾತ್ಮಕ ಷೇರುಗಳನ್ನು ಹೊಂದಿರುವ ಸಂಸ್ಥೆಯಾಗಿದೆ. ಇವುಗಳು ತಾವಾಗಿಯೇ ಸರಕುಗಳು ಅಥವಾ ಸೇವೆಗಳನ್ನು ಮಾರಾಟ ಮಾಡುವುದಿಲ್ಲ.

ಎಲ್ಸಿಡ್‌ ಇನ್ವೆಸ್ಟ್‌ಮೆಂಟ್ಸ್‌ ತನ್ನ ಷೇರುದಾರರಿಗೆ ಡಿವಿಡೆಂಡ್‌ ವಿತರಿಸುವ ವಿಚಾರದಲ್ಲೂ ಸುದ್ದಿಯಲ್ಲಿದೆ. 2023-4ರಲ್ಲಿ ಪ್ರತಿ ಷೇರಿಗೆ 25 ರೂ. ಡಿವಿಡೆಂಡ್‌ ಅನ್ನು ಘೋಷಿಸಿತ್ತು. ದಲಾಲ್‌ ಸ್ಟ್ರೀಟ್‌ನಲ್ಲಿ ಅಷ್ಟೇನೂ ಜನಪ್ರಿಯವಲ್ಲದ ಎಲ್ಸಿಡ್‌ ಷೇರು ಈಗ ಸಂಚಲನ ಸೃಷ್ಟಿಸಿದೆ. ಇದರ ಮಾರುಕಟ್ಟೆ ಮೌಲ್ಯ 4,725 ಕೋಟಿ ರೂ. ಇದುವರೆಗೆ ಎಂಆರ್‌ಎಫ್‌ ಷೇರು ಮಾತ್ರ ಲಕ್ಷ ರೂ. ದಾಟಿದ ಷೇರು ಎನ್ನಿಸಿತ್ತು. ಇದೀಗ ಎಲ್ಸಿಡ್‌ ಅಗ್ರ ಸ್ಥಾನಕ್ಕೇರಿದೆ.

ಇದನ್ನೂಓದಿ: DCX Systems Share Price: ಬೆಂಗಳೂರು ಮೂಲದ ಡಿಸಿಎಕ್ಸ್ ಸಿಸ್ಟಮ್ಸ್ ಷೇರು ಜಿಗಿತ

ಎಲ್ಸಿಡ್‌ ಕಂಪನಿಯು ಏಷ್ಯನ್‌ ಪೇಂಟ್ಸ್‌ನಲ್ಲಿ 2.9% ಷೇರುಗಳನ್ನು ಒಳಗೊಂಡಿದೆ. ಇದರ ಮೌಲ್ಯ 8,500 ಕೋಟಿ ರೂ. ಕಂಪನಿಯ ಮೌಲ್ಯ ಏರಿಕೆಗೆ ಇದೂ ಒಂದು ಕಾರಣ ಎನ್ನಲಾಗಿದೆ. ಒಟ್ಟಾರೆಯಾಗಿ ಈ ಬೆಳವಣಿಗೆಯಿಂದ ಷೇರು ಹೂಡಿಕೆದಾರರು ಕಲಿಯಬಹುದಾದ ಪಾಠವೇನೆಂದರೆ, ಷೇರಿನ ದರ ಅತ್ಯಲ್ಪ ಇದೆ ಎಂದ ಮಾತ್ರಕ್ಕೆ ಅದು ಅಗ್ಗದ ಮೌಲ್ಯದ ಷೇರು ಆಗಿರಲಿಕ್ಕಿಲ್ಲ. ಅದೇ ರೀತಿ ಷೇರಿನ ದರ ಹೆಚ್ಚು ಇದ್ದರೆ, ಅದುವೇ ಅತ್ಯಂತ ದುಬಾರಿ ಎನ್ನಲೂ ಸಾಧ್ಯವಿಲ್ಲ. ಎಲ್ಸಿಡ್‌ ಕಂಪನಿಯಲ್ಲಿ ಪ್ರವರ್ತಕರು 75% ಷೇರುಗಳನ್ನು ಹೊಂದಿದ್ದರೆ, ರಿಟೇಲ್‌ ಹೂಡಿಕೆದಾರರು 25% ಷೇರುಗಳನ್ನು ಹೊಂದಿದ್ದಾರೆ