ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ (Election Results) ರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ಇಂದು (ಶನಿವಾರ) ಪ್ರಕಟವಾಗಲಿದೆ. ಚುನಾವಣಾ ಆಯೋಗದಿಂದ ಮತ ಎಣಿಕೆಗೆ ಸಿದ್ಧತೆ ಪೂರ್ಣಗೊಂಡಿದೆ. ನವೆಂಬರ್ 23 ರಂದು ಬೆಳಿಗ್ಗೆ 8 ರಿಂದ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ ಎಣಿಕೆ ಅಂತ್ಯವಾದ ಬಳಿಕೆ ಸಂಜೆ 4 ಗಂಟೆಗೆ ಎರಡೂ ರಾಜ್ಯಗಳ ರಾಜಕೀಯ ಚಿತ್ರಣ ಸ್ಪಷ್ಟವಾಗಲಿದೆ.
ನವೆಂಬರ್ 13 ಮತ್ತು 20 ರಂದು ಜಾರ್ಖಂಡ್‌ನ 81 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆದಿತ್ತು ಹಾಗೂ ನವೆಂಬರ್ 20 ರಂದು ಮಹಾರಾಷ್ಟ್ರದಲ್ಲಿ 288 ಕ್ಷೇತ್ರಗಳಿಗೆ ಏಕೈಕ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. ಶನಿವಾರ (ನವೆಂಬರ್ 23) ಮತ ಎಣಿಕೆ ನಡೆಯಲಿದ್ದು, ಈ ಎರಡೂ ರಾಜ್ಯಗಳ ನಾಯಕರ ಹಣೆ ಬರಹ ನಿರ್ಧಾರವಾಗಲಿದೆ.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಜೊತೆಗೆ ಕರ್ನಾಟಕ, ಪಂಜಾಬ್, ಕೇರಳ, ಉತ್ತರ ಪ್ರದೇಶ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ಬೈ ಎಲೆಕ್ಷನ್ ಫಲಿತಾಂಶ ಹೊರಬೀಳಲಿದೆ. ಪಂಜಾಬ್ ರಾಜ್ಯದಲ್ಲಿ 4 ಬೈಎಲೆಕ್ಷನ್ ಮತ ಎಣಿಕೆ ನಡೆದರೆ, ಉತ್ತರ ಪ್ರದೇಶದಲ್ಲಿ 9, ಕೇರಳದಲ್ಲಿ ಒಂದು ಲೋಕಸಭಾ ಚುನಾವಣೆಯ (ವಯನಾಡು) ಮತದಾನ ಎಣಿಕೆ ನಡೆಯಲಿದೆ. ಇನ್ನು ಕರ್ನಾಟಕದಲ್ಲಿ ಮೂರು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
Exit poll Results 2024: ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯ ಎಂದಿದೆ ಸಮೀಕ್ಷೆ!
ಮತ ಎಣಿಕೆ ಪ್ರಕ್ರಿಯೆ ಶನಿವಾರ ಬೆಳಿಗ್ಗೆ 08 ಗಂಟೆಗೆ ಶುರುವಾಗಲಿದ್ದು, ಮೊದಲಿಗೆ ಪೋಸ್ಟಲ್ ಬ್ಯಾಲೆಟ್ಸ್ ಅನ್ನು ಮೊದಲು ಎಣಿಕೆ ಮಾಡಲಾಗುತ್ತದೆ, ಇದಾದ ಬಳಿಕ 08: 30 ಕ್ಕೆ ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಇವಿಎಂಗಳನ್ನು ತೆರೆಯಲಾಗುತ್ತದೆ. ಲೋಕಾ ಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿದ್ದ ಬಿಜೆಪಿ ನೇತೃತ್ವದ ಮಹಾಯುತಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟ?
ನವೆಂಬರ್ 20 ರಂದು ಮಹಾರಾಷ್ಟ್ರ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮ್ಯಾಟ್ರಿಜ್ ಸಂಸ್ಥೆಯು ಚುನಾವಾಣೋತ್ತರ ಸಮೀಕ್ಷೆಯನ್ನು ನಡೆಸಿತ್ತು. ಬಿಜೆಪಿ, ಶಿವಸೇನೆ ಹಾಗೂ ಎನ್‌ಸಿಪಿ ಒಳಗೊಂಡ ಮಹಾಯುತಿಗೆ ಮೈತ್ರಿಕೋಟ ಜಯ ಸಾಧಿಸಲಿದೆ ಎಂದು ಮ್ಯಾಟ್ರಿಜ್ ಸಮೀಕ್ಷೆ ತಿಳಿಸಿದೆ. ಮಹಾರಾಷ್ಟ್ರದಲ್ಲಿನ ಒಟ್ಟು 288 ವಿಧಾನ ಸಭಾ ಕ್ಷೇತ್ರಗಳ ಪೈಕಿ ಮಹಾಯುತಿ ಮೈತ್ರಿಕೋಟವು 150 ರಿಂದ 170 ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಇದರೊಂದಿಗೆ ಬಿಜೆಪಿ ಒಳಗೊಂಡ ಎನ್‌ಡಿಎ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿತ್ತು. ಆದರೆ, ಶನಿವಾರ ಮತ ಎಣಿಕೆಯ ನಂತರ ಮಹಾರಾಷ್ಟ್ರದಲ್ಲಿ ಯಾವ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಸ್ಪಷ್ಟವಾಗಲಿದೆ. ಅಂದ ಹಾಗೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು 145 ಸ್ಥಾನಗಳಲ್ಲಿ ಗೆಲುವು ಅಗತ್ಯವಿದೆ.
ಜಾರ್ಖಂಡ್‌ನಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ?
ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಬಹುಮತದೊಂದಿಗೆ ಅಧಿಕಾರವನ್ನು ವಹಿಸಿಕೊಳ್ಳಲಿದೆ ಎಂದು ನವೆಂಬರ್ 20 ರಂದು ಪೀಪಲ್ ಪಲ್ಸ್‌ನ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿತ್ತು. ಜಾರ್ಖಂಡ್‌ನಲ್ಲಿ ಬಹುಮತ ಸಾಧಿಸಿ ಸರ್ಕಾರ ರಚಿಸಲು 41 ಸ್ಥಾನಗಳಲ್ಲಿ ಗೆಲುವುದು ಅಗತ್ಯ. ಅದರಂತೆ ಎನ್‌ಡಿಎ ಚುನಾವಣೆಯಲ್ಲಿ 42 ರಿಂದ 48 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪೀಪಲ್ಸ್ ಪಲ್ಸ್ ಸಮೀಕ್ಷೆ ಹೇಳಿತ್ತು. ಇನ್ನು ವಿರೋಧ ಪಕ್ಷವಾದ ಜೆಎಂಎಂ ಸಾರಥ್ಯದ ಇಂಡಿಯಾ ಮೈತ್ರಿಕೂಟವು 16 ರಿಂದ18 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ತಿಳಿಸಿದೆ. ಕಾಂಗ್ರೆಸ್ ಪಕ್ಷ 8 ರಿಂದ 14 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದೆಂದು ಹೇಳಿದೆ.