ಮುಂಬೈ: ನಟಿ ಕಂಗನಾ ರಣಾವತ್(Kangana Ranaut) ನಟಿಸಿ ನಿರ್ದೇಶಿಸಿರುವ ಬಾಲಿವುಡ್‌ನ ‘ಎಮರ್ಜೆನ್ಸಿ’ (Emergency Movie) ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಸೆನ್ಸಾರ್ ಮಂಡಳಿ (CBFC)ಗೆ ತನ್ನ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ತಿಳಿಸಿದೆ. ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಿದರೆ ಅದನ್ನು ರಿಲೀಸ್ ಮಾಡಬಹುದಾಗಿದೆ ಎಂದು ಸಿಬಿಎಫ್‌ಸಿ ತಿಳಿಸಿದೆ.
‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್ ಕಳೆದ ವಾರ ಸೆನ್ಸಾರ್ ಮಂಡಳಿ (CBFC)ಗೆ ಖಡಕ್ ಸೂಚನೆ ನೀಡಿತ್ತು. ಎಮರ್ಜೆನ್ಸಿ ಚಿತ್ರಕ್ಕೆ ಪ್ರಮಾಣ ಪತ್ರ ನೀಡದೇ ಚಿತ್ರದ ಬಿಡುಗಡೆಗೆ ಅಡ್ಡಿಯಾಗಿರುವ ಸೆನ್ಸಾರ್ ಮಂಡಳಿಗೆ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿತ್ತು.
ಸಿಬಿಎಫ್‌ಸಿ ಪರಿಷ್ಕರಣೆ ಸಮಿತಿಯು ಚಿತ್ರಕ್ಕೆ ಕೆಲವು ಕಡಿತಗಳನ್ನು ಸೂಚಿಸಿದೆ. ಅದನ್ನು ಅನುಸರಿಸಿದರೆ ಸಿನಿಮಾ ಬಿಡುಗಡೆಗೆ ಯಾವುದೇ ಅಡ್ಡಿ ಇಲ್ಲ ಎಂದು ಸಿಬಿಎಫ್‌ಸಿ ಪರ ಹಾಜರಾದ ವಕೀಲ ಅಭಿನವ್ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿ.ಪಿ ಕೊಲಬವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರ ಪೀಠಕ್ಕೆ ತಿಳಿಸಿದೆ. ಝೀ ಪರವಾಗಿ ಹಾಜರಾದ ವಕೀಲ ಶರಣ್ ಜಗ್ತಿಯಾನಿ, ಚಿತ್ರ ಬಿಡುಗಡೆಗೂ ಮುನ್ನ 11 ಮಾರ್ಪಾಡುಗಳನ್ನು ಮಾಡಬೇಕಾದ ದಾಖಲೆಯನ್ನು ಪಡೆದುಕೊಂಡರು.
ಸೆನ್ಸಾರ್ ಮಂಡಳಿ(CBFC) ಇನ್ನೂ ಪ್ರಮಾಣ ಪತ್ರ ನೀಡದಿರುವ ಹಿನ್ನೆಲೆ ಹೈಕೋರ್ಟ್ ಮೆಟ್ಟಿಲೇರಿರುವ ಕಂಗನಾ ರಣಾವತ್(Kangana Ranaut) ನಟಿಸಿ ನಿರ್ದೇಶಿಸಿರುವ ಬಾಲಿವುಡ್‌ನ ‘ಎಮರ್ಜೆನ್ಸಿ’ (Emergency Movie) ಚಿತ್ರತಂಡಕ್ಕೆ ಅಲ್ಲೂ ಹಿನ್ನಡೆಯಾಗಿತ್ತು. ಪ್ರಮಾಣ ಪತ್ರ ನೀಡುವಂತೆ ಸೆನ್ಸಾರ್ ಮಂಡಳಿಗೆ ಆದೇಶ ನೀಡಲು ಕೋರ್ಟ್ ನಿರಾಕರಿಸಿತ್ತು.
ಮಧ್ಯಪ್ರದೇಶ ಹೈಕೋರ್ಟ್ ಈಗಾಗಲೇ ಸಿಬಿಎಫ್‌ಸಿಗೆ ನಿರ್ದೇಶನ ನೀಡಿದ್ದು, ನಾವು ಯಾವುದೇ ಆದೇಶ ಹೊರಡಿಸಿದರೆ ಅದು ನೇರವಾಗಿ ಆ ಆದೇಶಕ್ಕೆ ವಿರುದ್ಧವಾಗಿರುತ್ತದೆ. ನಾವು ಇಂದು ಯಾವುದೇ ಆದೇಶವನ್ನು ಜಾರಿಗೊಳಿಸಿದರೆ ಮತ್ತೊಂದು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಲು ನಾವು CBFC ಗೆ ಹೇಳಿದಂತಾಗುತ್ತದೆ. ನಾವು ಅದನ್ನು ಮಾಡಲು ಸಾಧ್ಯವಿಲ್ಲ. ಸೆನ್ಸಾರ್ ಮಂಡಳಿಯು ಚಿತ್ರದ ವಿರುದ್ಧ ಎತ್ತಿರುವ ಆಕ್ಷೇಪಣೆಗಳನ್ನು ಪರಿಗಣಿಸಿ ನಂತರ ಸೆಪ್ಟೆಂಬರ್ 18 ರೊಳಗೆ ಪ್ರಮಾಣೀಕರಿಸುವಂತೆ ಬಾಂಬೆ ಹೈಕೋರ್ಟ್ ಹೇಳಿತ್ತು.
ಮಧ್ಯಪ್ರದೇಶ ಕೋರ್ಟ್ ಹೇಳೋದೇನು?
ಮಂಗಳವಾರ, ಮಧ್ಯಪ್ರದೇಶ ಹೈಕೋರ್ಟ್ ಕಂಗನಾ ರಣಾವತ್ ಅಭಿನಯದ ಚಿತ್ರದಲ್ಲಿ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳನ್ನು ಒಳಗೊಂಡಿದೆ ಮತ್ತು ಆದ್ದರಿಂದ ಅಶಾಂತಿಯನ್ನು ಉಂಟುಮಾಡಬಹುದು ಎಂದು ಸಿಖ್ ಗುಂಪುಗಳು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿತು. ಚಿತ್ರಕ್ಕೆ ಪ್ರಮಾಣಪತ್ರ ನೀಡುವ ಮೊದಲು ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅರ್ಜಿದಾರ ಸಿಖ್ ಗುಂಪುಗಳ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಸೆನ್ಸಾರ್ ಮಂಡಳಿಗೆ ನ್ಯಾಯಾಲಯ ಸೂಚಿಸಿದೆ.
ಕಂಗನಾ ರಾಣಾವತ್ ಮೊದಲ ಬಾರಿಗೆ ಏಕಾಂಗಿಯಾಗಿ ಆ್ಯಕ್ಷನ್ ಕಟ್ ಹೇಳಿರುವ ʼಎಮರ್ಜೆನ್ಸಿʼ ಸಿನಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ್ನಾಧರಿಸಿದೆ. ಅದರಲ್ಲಿಯೂ ಅವರು 1975 ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಲಿದೆ. ಇದೇ ಕಾರಣಕ್ಕೆ ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಿದೆ.
ಈ ಸುದ್ದಿಯನ್ನೂ ಓದಿ: Kangana Ranaut: ಕೃಷಿ ಕಾಯ್ದೆ ಕುರಿತಾದ ಹೇಳಿಕೆ ಹಿಂಪಡೆದ ಕಂಗನಾ