ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೊರಾದಲ್ಲಿ ಭದ್ರತಾ ಪಡೆ ಪೊಲೀಸರು ಮತ್ತು ಉಗ್ರಗಾಮಿಗಳ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ.
ಉಗ್ರರ ಚಲನವಲನಗಳ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಸಿಆರ್ ಪಿಎಫ್, ರಾಷ್ಟ್ರೀಯ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಸುಂಬ್ಲಾರ್ ಜಿಲ್ಲೆಯ ಶೊಕ್ ಬಾಬ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿ ಪ್ರದೇಶವನ್ನು ಸುತ್ತುವರಿಯಿತು.
ಪೊಲೀಸರು ಮತ್ತು ಯೋಧರು ಬಂದಿರುವ ಮಾಹಿತಿ ಸಿಕ್ಕಿದ ಕೂಡಲೇ ಅವಿತು ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಯೋಧರು ಪ್ರತ್ಯುತ್ತರ ನೀಡಿದಾಗ ಎನ್ ಕೌಂಟರ್ ಏರ್ಪಟ್ಟಿತು. ಕಾಳಗದಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದಾರೆ. ಯೋಧರೊಬ್ಬರಿಗೆ ಗಾಯವಾಗಿ, ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯ ಲಾಯಿತು. ಸ್ಥಳದಿಂದ ಇನ್ನಷ್ಟು ಉಗ್ರರು ತಪ್ಪಿಸಿಕೊಂಡು ಹೋಗದಂತೆ ಹೆಚ್ಚಿನ ಭದ್ರತಾ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಈ ಮಧ್ಯೆ, ಪೂಂಚ್ ಜಿಲ್ಲೆಯ ಮೆಂದರ್ ನ ಕೃಷ್ಣ ಘಾಟಿ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ ಗಣಿ ಸ್ಫೋಟದಲ್ಲಿ ಆಕಸ್ಮಿಕವಾಗಿ ಸಿಪಾಯಿ ಕಮಲ್ ದೇವ್ ವೈದ್ಯ ಎಂಬುವವರು ಹುತಾತ್ಮರಾಗಿ ದ್ದಾರೆ. ಕರ್ತವ್ಯದಲ್ಲಿದ್ದ ವೇಳೆ ಸಿಪಾಯಿ ವೈದ್ಯ ಅವರು ಗಣಿ ಸ್ಫೋಟದಲ್ಲಿ ತೀವ್ರ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೃತಪಟ್ಟಿದ್ದಾರೆ.
ಕುಲ್ಗಾಮ್ ನ ಮುನಂದ್ ಪ್ರದೇಶದಲ್ಲಿ ಎನ್ ಕೌಂಟರ್ ಮುಂದುವರಿದಿದ್ದು ಇದುವರೆಗೆ ಓರ್ವ ಉಗ್ರ ಹತನಾಗಿದ್ದಾನೆ.ಪೊಲೀಸರು ಮತ್ತು ಭದ್ರತಾ ಪಡೆಗಳು ಸದ್ಯ ಸ್ಥಳದಲ್ಲಿದ್ದು ಶೋಧ ಕಾರ್ಯ ಮುಂದುವರಿದಿದೆ, ಹೆಚ್ಚಿನ ವಿವರ ಲಭ್ಯವಾಗಿಲ್ಲ ಎಂದು ಜಮ್ಮು-ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.