Friday, 22nd November 2024

Encounter In Kulgam: ಜಮ್ಮು & ಕಾಶ್ಮೀರದಲ್ಲಿ ಎನ್‌ಕೌಂಟರ್‌; ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Encounter In Kulgam

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu & Kashmir)ದ ಕುಲ್ಗಾಮ್ ಜಿಲ್ಲೆಯಲ್ಲಿ ಶನಿವಾರ (ಸೆಪ್ಟೆಂಬರ್‌ 28) ನಡೆದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಅಪರಿಚಿತ ಉಗ್ರರನ್ನು ಹತ್ಯೆಗೈದಿವೆ. ಈ ವೇಳೆ ಮೂವರು ಸೇನಾ ಸಿಬ್ಬಂದಿ ಮತ್ತು ಓರ್ವ ಪೊಲೀಸ್‌ ಅಧಿಕಾರಿ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ (Encounter In Kulgam).

ʼʼಕುಲ್ಗಾಮ್ ಜಿಲ್ಲೆಯ ಅಡಿಗಮ್ ದೇವ್ಸರ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಭದ್ರತಾ ಸಿಬ್ಬಂದಿ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ಜರುಗಿದೆ. ಈ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಮೂವರು ಸೈನಿಕರು ಮತ್ತು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಗಾಯಗೊಂಡಿದ್ದಾರೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʼʼಕುಲ್ಗಾಮ್‌ನ ಅಡಿಗಮ್ ದೇವ್ಸರ್ ಪ್ರದೇಶದಲ್ಲಿ ಎನ್‌ಕೌಂಟರ್‌ ನಡೆಯುತ್ತಿದೆ. ಪೊಲೀಸರು ಮತ್ತು ಭದ್ರತಾ ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರ ಕಲೆ ಹಾಕಲಾಗುತ್ತಿದೆʼʼ ಎಂದು ಕಾಶ್ಮೀರ ವಲಯ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕುಲ್ಗಾಮ್ ಎನ್‌ಕೌಂಟರ್‌ ಬಗ್ಗೆ ಪ್ರತಿಕ್ರಿಯಿಸಿದ ಕಾಶ್ಮೀರ ಐಜಿಪಿ ವಿ.ಕೆ.ಬರ್ಡಿ ಅವರು, “ಅರಿಗಮ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿಕೊಂಡಿರುವ ಬಗ್ಗೆ ಭದ್ರತಾ ಪಡೆಗಳಿಗೆ ಶುಕ್ರವಾರ ತಡರಾತ್ರಿ ಮಾಹಿತಿ ಸಿಕ್ಕಿತು. ಭದ್ರತಾ ಪಡೆಯ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ ಉಗ್ರರು ಅವರ ಮೇಲೆ ಗುಂಡು ಹಾರಿಸಿದರು. ಬಳಿಕ ಭದ್ರತಾ ಸಿಬ್ಬಂದಿ ಮರುದಾಳಿ ನಡೆಸಿದ್ದಾರೆ. ಈಗಲೂ ಎನ್‌ಕೌಂಟರ್‌ ನಡೆಯುತ್ತಿದೆ. ಮೂವರು ಭದ್ರತಾ ಸಿಬ್ಬಂದಿ ಮತ್ತು ಒಬ್ಬ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆʼʼ ಎಂದು ಮಾಹಿತಿ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಯ 3ನೇ ಹಂತದ ಮತದಾನಕ್ಕೆ ಮುಂಚಿತವಾಗಿ ಸೆಪ್ಟೆಂಬರ್ 22 ರಂದು ಕಿಶ್ತ್ವಾರ್ ಜಿಲ್ಲೆಯ ಚಟ್ರೂ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್‌ ನಡೆದಿತ್ತು. ಅದಕ್ಕೂ ಮುಂಚಿತವಾಗಿ ಸೆಪ್ಟೆಂಬರ್‌ 15ರಂದು ಪೂಂಛ್‌ ಜಿಲ್ಲೆಯಲ್ಲಿ ಎನ್‌ಕೌಂಟರ್‌ ನಡೆದಿತ್ತು. ಇನ್ನು ಸೆಪ್ಟೆಂಬರ್‌ 14ರಂದು ಬಾರಮುಲ್ಲಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆ ಸಿಬ್ಬಂದಿ ಓರ್ವ ಭಯೋತ್ಪಾದಕನ್ನು ಹೊಡೆದುರುಳಿಸಿದ್ದರು. ಈ ವೇಳೆ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಸೆಪ್ಟೆಂಬರ್‌ 11 ಉದ್ದಮ್‌ಪುರದಲ್ಲಿ ಸೇನೆ ಉಗ್ರರನ್ನು ಹಿಮ್ಮೆಟ್ಟಿಸಿತ್ತು.

ಇದನ್ನೂ ಓದಿ: J&K assembly elections : ಜಮ್ಮು- ಕಾಶ್ಮೀರ ಚುನಾವಣೆಗೆ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ; ಅಲ್ಪ ಸಂಖ್ಯಾತ ಆಯೋಗ ಸೇರಿದಂತೆ ಇನ್ನೇನಿವೆ?

ವಿಧಾನಸಭಾ ಚುನಾವಣೆ

ಸದ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ದಶಕಗಳ ಬಳಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಭಯೋತ್ಪಾದಕರ ಚಟುವಟಿಕೆ ನಿಯಂತ್ರಿಸಲು ಸೇನಾ ಸಿಬ್ಬಂದಿ ಕಾರ್ಯ ನಿರತರಾಗಿದ್ದಾರೆ. ಒಟ್ಟು 3 ಹಂತದಲ್ಲಿ ಮತದಾನ ನಡೆಯಲಿದೆ. ಮೊದಲೆರಡು ಹಂತದ ಮತದಾನ ಸೆಪ್ಟೆಂಬರ್‌ 18 ಮತ್ತು 25ರಂದು ನಡೆದಿದೆ. 3ನೇ ಹಂತ ಅಕ್ಟೋಬರ್‌ 1ರಂದು ನಡೆಯಲಿದ್ದು, ಫಲಿತಾಂಶ ಅಕ್ಟೋಬರ್‌ 8ರಂದು ಘೋಷಣೆಯಾಗಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದುಪಡಿಸಿದ ಬಳಿಕ ಮೊದಲ ಬಾರಿ ಚುನಾವಣೆ ನಡೆಯುತ್ತಿದೆ. ಕಣಿವೆ ರಾಜ್ಯದಲ್ಲಿ ಒಟ್ಟು 90 ವಿಧಾನಸಬಾ ಕ್ಷೇತ್ರಗಳಿವೆ.