ವಯನಾಡು: ಕೇರಳ ಪೊಲೀಸ್ ಪಡೆಯ ಥಂಡರ್ ಬೋಲ್ಟ್ ಕಮಾಂಡೋ ತಂಡ ಮತ್ತು ಮಾವೋವಾದಿಗಳ ನಡುವೆ ವಯನಾಡು-ಕಣ್ಣೂರು ಅರಣ್ಯ ಪ್ರದೇಶದ ಚಪ್ಪರ ಕಾಲೊನಿಯಲ್ಲಿ ಗುಂಡಿನ ಚಕಮಕಿ ಜರುಗಿದೆ.
ಲಭ್ಯವಾದ ರಹಸ್ಯ ಮಾಹಿತಿಯ ಆಧಾರದ ಮೇಲೆ ಚಪ್ಪರ ಕಾಲೊನಿಗೆ ಬಂದ ಮಾವೋವಾದಿ ತಂಡವನ್ನು ಪೊಲೀಸರು ಸುತ್ತುವರೆದಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಮಾವೋವಾದಿಗಳ ಗುಂಪಿನಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಇದ್ದರು. ಓರ್ವ ಪುರುಷ ಮತ್ತು ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಂದ್ರು ಮತ್ತು ಉನ್ನಿಮಯ ಎಂದು ಗುರುತಿಸಲಾಗಿದೆ. ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಪೆರಿಯಾ ಅರಣ್ಯ, ತಲಪುಳ, ಮಖಿಮಲ ಮತ್ತು ಅರಳಂ ಅರಣ್ಯ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ವಶಕ್ಕೆ ಪಡೆದಿರುವ ಆರೋಪಿಗಳನ್ನು ಕಲ್ಪೆಟ್ಟಾಗೆ ಸ್ಥಳಾಂತರಿಸಲಾಗಿದೆ. ತಲಪುಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‌ಕೌಂಟರ್ ನಡೆದಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಸ್ಥಳೀಯ ನಿವಾಸಿ ಅನೀಶ್ ಎಂಬವರ ಮನೆಗೆ ಬಂದ ಮಾವೋವಾದಿಗಳು ಆಹಾರ ತೆಗೆದುಕೊಂಡು ಬರುವಾಗ ಅವರನ್ನು ಪೊಲೀಸರು ಸುತ್ತುವರೆ ದಿದ್ದಾರೆ. ಪೊಲೀಸರು ಶರಣಾಗುವಂತೆ ಸೂಚಿಸಿದರೂ ಸಹ ಅವರು ಸಿದ್ಧರಿಲ್ಲದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಅರ್ಧ ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಮನೆಯ ಬಾಗಿಲು ಸೇರಿದಂತೆ ಮತ್ತಿತರೆ ವಸ್ತುಗಳಿಗೆ ಗುಂಡು ಹಾರಿಸಲಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಕೋಝಿಕ್ಕೋಡ್ ಜಿಲ್ಲೆಯ ಮಾವೋವಾದಿ ನಾಯಕನನ್ನು ಬಂಧಿಸಲಾಗಿದೆ. ಬಂಧಿತ ಮಾವೋವಾದಿಯಿಂದ ಪಡೆದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಇನ್ನೊಂದೆಡೆ, ವಯನಾಡಿನಲ್ಲಿ ಮಾವೋವಾದಿಗಳಿರುವ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.