Thursday, 12th December 2024

ಉರಿ ಸೆಕ್ಟರ್‌ನಲ್ಲಿ ಎನ್‌ಕೌಂಟರ್‌: ಓರ್ವ ಭದ್ರತಾ ಸಿಬ್ಬಂದಿ, ಇಬ್ಬರ ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಯ ಸಿಬ್ಬಂದಿ ಕನಿಷ್ಠ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

ಹತ ಉಗ್ರರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ಉರಿ ಸೆಕ್ಟರ್‌ನ ಗೊಹಲ್ಲಾನ್ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನಾ ಸಿಬ್ಬಂದಿ ಉಗ್ರರ ಅನುಮಾನಾಸ್ಪದ ಚಲನೆಯನ್ನು ಗಮನಿಸಿ ಪ್ರಶ್ನಿಸಿ ದಾಗ, ಭಯೋತ್ಪಾದಕರು ಗುಂಡು ಹಾರಿಸಿದರು. ಬಳಿಕ ಸೇನಾ ಸಿಬ್ಬಂದು ಪ್ರತಿ ದಾಳಿ ನಡೆಸಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ. ʼʼಬಳಿಕ ನಡೆದ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಜೂನ್ 9ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಮೃತಪಟ್ಟಿದ್ದರು. ಜಮ್ಮು-ಕಾಶ್ಮೀರದಲ್ಲಿರುವ ಶಿವ ಖೋರಿ ದೇವಸ್ಥಾನಕ್ಕೆ ಹಿಂದು ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು.

ಅದಾದ ಬಳಿಕವೂ ಭಯೋತ್ಪಾದಕರು ದಾಳಿ ನಡೆಸಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ.