ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಶನಿವಾರ (ನ. 2) ಭಾರತೀಯ ಭದ್ರತಾ ಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 2 ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ (Encounters) ಮೂವರು ಭಯೋತ್ಪಾದಕರು ಹತರಾಗಿದ್ದಾರೆ. ಅನಂತ್‌ನಾಗ್‌ನಲ್ಲಿ ಇಬ್ಬರು ಮತ್ತು ಖನ್ಯಾರ್‌ನಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ.
ಖನ್ಯಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಪೊಲೀಸರು ಗಾಯಗೊಂಡು, ಓರ್ವ ಉಗ್ರ ಹತನಾಗಿದ್ದಾನೆ. ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಇಬ್ಬರು ಉಗ್ರರು ಅಡಗಿರುವ ಸಾಧ್ಯತೆ ಇದೆ. ಇನ್ನು ಅನಂತ್‌ನಾಗ್‌ನ ಹಲ್ಕಾನ್ ಗಲಿ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇತ್ತ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಪ್ರದೇಶದಲ್ಲಿ ಸೇನೆ ಶೋಧ ಕಾರ್ಯವನ್ನು ಚುರುಕುಗೊಳಿಸಿದೆ.
ಶುಕ್ರವಾರ ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು. ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಮಗಮ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದರು. ಕಳೆದ 2 ವಾರಗಳ ಅಂತರದಲ್ಲಿ ಕಣಿವೆ ರಾಜ್ಯದಲ್ಲಿ ವಲಸೆ ಕಾರ್ಮಿಕರನ್ನು ಗುರುಯಾಗಿಸಿಕೊಂಡು ನಡೆದ 4ನೇ ದಾಳಿ ಇದಾಗಿದೆ. ಅ. 20ರಂದು ಗಂಡರ್ಬಾಲ್ ಜಿಲ್ಲೆಯ ಗಗಾಂಗೀರ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಓರ್ವ ವೈದ್ಯ ಸೇರಿ 7 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಸುರಂಗ ಕಾಮಗಾರಿ ನಡೆಸುತ್ತಿದ್ದ ಇಬ್ಬರು ಬಿಹಾರ ಮೂಲದ ಕಾರ್ಮಿಕರೂ ಸೇರಿದ್ದರು.
ನ್ಯಾಷನಲ್ ಕಾನ್ಫರೆನ್ಸ್(National Conference) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ(Farooq Abdullah) ಅವರು ಈ ಭಯೋತ್ಪಾದಕ ದಾಳಿಯ ಹಿಂದೆ ಕಳೆದ ತಿಂಗಳು ಅಧಿಕಾರಕ್ಕೆ ಬಂದ ಉಮರ್ ಅಬ್ದುಲ್ಲಾ ನೇತೃತ್ವದ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
All Three Hardcore Terrorists Eliminated Post Intense Firefight.
— SQUAD SCORPION 7 🇮🇳 (@Silent_Forces0) October 29, 2024
9-Punjab Regiment boys after completing the successful mission in Akhnoor.
जो बोले सो निहाल सत श्री अकाल वाहेगुरु जी दा खालसा वाहेगुरु जी दी फतेह 🙏 pic.twitter.com/zHCOTDXAQT
ಅಖ್ನೂರ್ ಸೆಕ್ಟರ್‌ನಲ್ಲಿ ಅ. 28ರಂದು ಸೇನಾ ವಾಹನದ ಮೇಲೆ ದಾಳಿ ನಡೆಸಿದ ಮೂವರು ಭಯೋತ್ಪಾದಕರನ್ನು ಸೇನೆ ಅ. 29ರಂದು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿತ್ತು. ಬರೋಬ್ಬರಿ 27 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರ ಹತ್ಯೆ ಮಾಡಲಾಗಿದೆ ಎಂದು ಸೇನೆ ಘೋಷಿಸಿತ್ತು. ಈ ಕಾರ್ಯಾಚರಣೆಯಲ್ಲಿ ಕೆ 9 ಘಟಕದ ಭಾಗವಾದ 4 ವರ್ಷದ ‘ಫ್ಯಾಂಟಮ್’ ಎಂಬ ಶ್ವಾನವನ್ನು ಸೇನೆಯು ಕಳೆದುಕೊಂಡಿತ್ತು. ಅಪ್ರತಿಮೆ ಸಾಹಸ ತೋರಿದ, ನಿಜವಾದ ಹೀರೋ ‘ಫ್ಯಾಂಟಮ್’ಗೆ ಶ್ರದ್ಧಾಂಜಲಿ ಎಂದು ಸೇನೆ ಸ್ಮರಿಸಿಕೊಂಡಿದೆ.
ಅ. 24ರಂದು ಬಾರಾಮುಲ್ಲಾದ ಗುಲ್ಮಾರ್ಗ್ ಬಳಿ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಘಟನೆಯಲ್ಲಿ ಎರಡು ಸೈನಿಕರು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದರು. ಈ ಘಟನೆಗೂ ಮೊದಲು ತ್ರಾಲ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಉತ್ತರಪ್ರದೇಶ ಮೂಲದ ಕಾರ್ಮಿಕ ಗಾಯಗೊಂಡಿದ್ದ. ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Rajnath Singh: ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುತ್ತೇವೆ; ರಾಜನಾಥ್ ಸಿಂಗ್ ಗುಡುಗು