ನವದೆಹಲಿ: ಪಶ್ಚಿಮ ದಿಲ್ಲಿಯ ಬಾಬಾ ಹರಿದಾಸ್ ನಗರದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರ ಸೋಗಿನಲ್ಲಿ ಕೋಟಿ ಕೋಟಿ ರೂಪಾಯಿ ಗಳನ್ನು ಲೂಟಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬಾ ಹರಿದಾಸ್ ನಗರದಲ್ಲಿರುವ ಮನೆಗೆ ನುಗ್ಗಿದ ದುಷ್ಕರ್ಮಿಗಳು ಇಡಿ ಅಧಿಕಾರಿಗಳಂತೆ ನಟಿಸಿದ್ದಾರೆ. ಬಳಿಕ 3.20 ಕೋಟಿ ರೂಪಾಯಿ ದೋಚಿ ಪರಾರಿಯಾಗಿದ್ದಾರೆ.
ಆರು ಮಂದಿ ನನ್ನ ಮನೆಗೆ ಬಂದು ನಾವು ಇಡಿ ಇಲಾಖೆಯವರು ಎಂದು ಹೇಳಿ ನನ್ನ ಮನೆಯಿಂದ 3 ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಸಂತ್ರಸ್ತ ಕರೆಯಲ್ಲಿ ತಿಳಿಸಿದ್ದಾರೆ. ದುಷ್ಕರ್ಮಿಗಳು ಎರಡು ಕಾರುಗಳಲ್ಲಿ ಬಂದಿದ್ದು, ಅವರೆಲ್ಲರ ಬಳಿ ಬಂದೂಕುಗಳಿದ್ದವು ಎಂದು ದೂರುದಾರ ರವಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸಂತ್ರಸ್ತ ರವಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತಂಡ ರಚಿಸಿ ತನಿಖೆ ಆರಂಭಿಸಿದ್ದರು. ತನಿಖೆಯ ನಂತರ, ಪೊಲೀಸರು ಆರು ಆರೋಪಿಗಳಲ್ಲಿ ಒಬ್ಬನನ್ನು ಹರಿಯಾಣದ ಗೊಹಾನಾದಿಂದ ಬಂಧಿಸಲಾಗಿದ್ದು, ಆತನನ್ನು ಅಮಿತ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು 70 ಲಕ್ಷ ನಗದು, ಪಿಸ್ತೂಲ್ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಅಮಿತ್ ವಿಚಾರಣೆಯ ಸಮಯದಲ್ಲಿ ಇಬ್ಬರು ಆರೋಪಿಗಳಾದ ರೋಹಿತ್ (21) ಮತ್ತು ಮನೀಶ್ ಹೆಸರುಗಳನ್ನು ಉಲ್ಲೇಖಿಸಿದ್ದಾನೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಅವರಿಬ್ಬರನ್ನು ಪತ್ತೆ ಮಾಡಿ ಬಂಧಿಸಿದರು.
ದರೋಡೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳು ಮತ್ತು ಇತರರನ್ನು ವಿಚಾರಣೆ ನಡೆಸುತ್ತಿರುವ ಪೊಲೀಸ್ ತಂಡವು ದುಷ್ಕರ್ಮಿಗಳ ಹುಡುಕಾಟಕ್ಕಾಗಿ ಹಲವೆಡೆ ದಾಳಿ ನಡೆಸುತ್ತಿದೆ. ದರೋಡೆಯಾದ 3.20 ಕೋಟಿ ರೂಪಾಯಿಗಳಲ್ಲಿ ಇದುವರೆಗೆ 1.27 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.