Friday, 22nd November 2024

Engineer Rashid: ಜಾಮೀನು ಅವಧಿ ಮುಗಿಯುತ್ತಿದ್ದಂತೆ ತಿಹಾರ್‌ ಜೈಲಿಗೆ ಮರಳಿದ ಎಂಜಿನಿಯರ್‌ ರಶೀದ್‌

Engineer Rashid

ಶ್ರೀನಗರ: ಈ ಬಾರಿ ಲೋಕಸಭೆ ಚುನಾವಣೆ(Loksabha Election)ಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ ಮತ್ತು ಬಾರಾಮುಲ್ಲಾ ಸಂಸದ ಶೇಖ್ ಅಬ್ದುಲ್ ರಶೀದ್(Sheikh Abdul Rashid)ಅಲಿಯಾಸ್ ಇಂಜಿನಿಯರ್ ರಶೀದ್(Engineer Rashid) ಅವರ ಮಧ್ಯಂತರ ಜಾಮೀನಿನ ಅವಧಿ ಇಂದು ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಅವರು ದೆಹಲಿಯಲ್ಲಿರುವ ತಿಹಾರ್ ಜೈಲಿಗೆ ಶರಣಾದರು.

ಎಂಜಿನಿಯರ್ ರಶೀದ್‌ಗೆ ಮಧ್ಯಂತರ ಜಾಮೀನು

2024 ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಸೆಪ್ಟೆಂಬರ್ 10 ರಂದು ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಅವರ ತಂದೆಯ ಅನಾರೋಗ್ಯದ ಆಧಾರದ ಮೇಲೆ ಅಕ್ಟೋಬರ್ 28 ರವರೆಗೆ ಈ ಜಾಮೀನು ಅವಧಿಯನ್ನು ವಿಸ್ತರಿಸಲಾಯಿತು. ದಾಖಲೆಗಳನ್ನು ಪರಿಶೀಲಿಸಿದ ನಂತರ ಎನ್ಐಎ ಕೂಡ ಅವರ ಜಾಮೀನು ವಿಸ್ತರಣೆ ಮನವಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ.

2017 ರ ಭಯೋತ್ಪಾದಕರಿಗೆ ಹಣಸಹಾಯ ಮಾಡಿದ ಪ್ರಕರಣದಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಲ್ಪಟ್ಟ ನಂತರ ರಶೀದ್ 2019 ರಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದ ಶೇಖ್ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.

ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಎರಡು ಬಾರಿ ಶಾಸಕನಾಗಿದ್ದ ರಶೀದ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2019 ರಲ್ಲಿ ಭಯೋತ್ಪಾದನೆ-ಧನಸಹಾಯ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಆತ ನ್ಯಾಷನಲ್‌ ಕಾನ್ಫರೆನ್ಸ್‌ನ ಓಮರ್‌ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿ 4,7,2481 ಮತಗಳನ್ನು ಗಳಿಸಿದ್ದಾನೆ. ಒಮ್ಮೆಯೂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡದ ರಶೀದ್ 2,04,142 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳು ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತಗಳಲ್ಲಿ ನಡೆದವು. ಅಕ್ಟೋಬರ್ 8 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು, ಇದರಲ್ಲಿ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ 48 ಸ್ಥಾನಗಳೊಂದಿಗೆ ಬಹುಮತವನ್ನು ಪಡೆದುಕೊಂಡು ಸರ್ಕಾರ ರಚಿಸಿದೆ.

ಈ ಸುದ್ದಿಯನ್ನೂ ಓದಿ: Supreme Court: ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪನೆ; ಅರ್ಜಿಗಳ ತುರ್ತು ವಿಚಾರಣೆಗೆ ಸುಪ್ರೀಂ ಗ್ರೀನ್‌ ಸಿಗ್ನಲ್‌