Friday, 20th September 2024

Engineer Rashid: ಆರ್ಟಿಕಲ್‌ 370 ಮರುಜಾರಿಗೆ ಬೇಡಿಕೆ; INDI ಒಕ್ಕೂಟಕ್ಕೆ ಆಫರ್‌ ಕೊಟ್ಟ ಎಂಜಿನಿಯರ್‌ ರಶೀದ್‌

Engineer Rashid

ಶ್ರೀನಗರ: ಮ‍ಧ್ಯಂತರ ಜಾಮೀನು(Interim Bail) ಪಡೆದು ತಿಹಾರ್‌ ಜೈಲಿನಿಂದ ಹೊರಬಂದಿರುವ ಅವಾಮಿ ಇತ್ತೇಹದ್‌ ಪಕ್ಷ(AIP)ದ ಮುಖ್ಯಸ್ಥ ಹಾಗೂ ಸಂಸದ ಶೇಖ್‌ ಅಬ್ದುಲ್‌ ರಶೀದ್‌(Engineer Rashid) ಅಲಿಯಾಸ್‌ ಎಂಜಿನಿಯರ್‌ ರಶೀದ್‌ ಆರ್ಟಿಕಲ್‌ 370(Article 370) ಮರು ಜಾರಿ ಬಗ್ಗೆ ಧ್ವನಿ ಎತ್ತಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿರುವ ರಶೀದ್‌, ಇಂಡಿಯಾ ಮೈತ್ರಿಕೂಟ(INDIA alliance)ಕ್ಕೆ ಸೇರ್ಪಡೆಗೊಳ್ಳುವ ಬಗ್ಗೆ ಆಸಕ್ತಿ ತೋರಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ ಕಣಿವೆ ರಾಜ್ಯದಲ್ಲಿ ರದ್ದಾಗಿರುವ ಆರ್ಟಿಕಲ್‌ 370 ಮರುಜಾರಿಗೊಳಿಸಲು ಒಪ್ಪಿದರೆ ತಾವು ಇಂಡಿಯಾ ಒಕ್ಕೂಟಕ್ಕೆ ಸೇರ್ಪಡೆಗೊಳ್ಳಲು ತಯಾರಾಗಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್‌ ಯಾವಾಗ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತದೋ ಆಗ ಆರ್ಟಿಕಲ್‌ 370 ಅನ್ನು ಪುನಃ ಸ್ಥಾಪಿಸುವುದಾಗಿ ಭರವಸೆ ನೀಡಿದರೆ ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತೇನೆ ಎಂದು ತಿಳಿಸಿದ್ದಾರೆ.

2017 ರ ಭಯೋತ್ಪಾದಕರಿಗೆ ಹಣಸಹಾಯ ಮಾಡಿದ ಪ್ರಕರಣದಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಲ್ಪಟ್ಟ ನಂತರ ರಶೀದ್ 2019 ರಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದ ಶೇಖ್ ರಶೀದ್ ಅಲಿಯಾಸ್ ಇಂಜಿನಿಯರ್ ರಶೀದ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಅಕ್ಟೋಬರ್ 2 ರವರೆಗೆ ಮಧ್ಯಂತರ ಜಾಮೀನು ನೀಡಿದೆ.

ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಎರಡು ಬಾರಿ ಶಾಸಕನಾಗಿದ್ದ ರಶೀದ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2019 ರಲ್ಲಿ ಭಯೋತ್ಪಾದನೆ-ಧನಸಹಾಯ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಆತ ನ್ಯಾಷನಲ್‌ ಕಾನ್ಫರೆನ್ಸ್‌ನ ಓಮರ್‌ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿ 4,7,2481 ಮತಗಳನ್ನು ಗಳಿಸಿದ್ದಾನೆ. ಒಮ್ಮೆಯೂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡದ ರಶೀದ್ 2,04,142 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದ.

ಶೇಖ್‌ ರಶೀದ್‌ಗೆ ಅ.2ರವರೆಗೆ ಜಾಮೀನು ನೀಡಿ ಕೋರ್ಟ್‌ಮಹತ್ವದ ಆದೇಶ ಹೊರ ಹಾಕಿದೆ. 2 ಲಕ್ಷ ರೂ. ಬಾಂಡ್‌ ಆಧಾರದಲ್ಲಿ ಷರತ್ತು ಬದ್ಧ ಜಾಮೀನು ನೀಡಿದೆ. ಆ ಮೂಲಕ ಅವರು ಮುಂಬರುವ ಜಮ್ಮು-ಕಾಶ್ಮೀರ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ.

ಈ ಸುದ್ದಿಯನ್ನೂ ಓದಿ: Sheikh Abdul Rashid: ಜೈಲಿನಿಂದಲೇ ಸ್ಪರ್ಧಿಸಿ ಸಂಸದನಾಗಿದ್ದ ಎಂಜಿನಿಯರ್‌ ರಶೀದ್‌ಗೆ ಬಿಗ್‌ ರಿಲೀಫ್‌; ಮಧ್ಯಂತರ ಜಾಮೀನು ಮಂಜೂರು