ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಇಪಿಎಫ್‌ಒ ಇಂಟರ್‌ನ್ಯಾಶನಲ್ ಸೋಶಿಯಲ್ ಸೆಕ್ಯುರಿಟಿ ಅಸೋಸಿಯೇಶನ್ ಮಾನ್ಯತೆ ಗಳಿಸಿದೆ.
ಇದರಿಂದಾಗಿ, ಪಿಂಚಣಿದಾರರಿಗೆ ಅಂತಾರಾಷ್ಟ್ರೀಯ ಮಟ್ಟದ ಪಿಂಚಣಿ ವೃತ್ತಿಪರರ ಜ್ಞಾನ, ಮಾರ್ಗದರ್ಶನ, ಸೇವೆ ಮತ್ತು ಬೆಂಬಲ ಸಿಗಲಿದೆ. ಷೇರುಗಳಲ್ಲಿ ಹೂಡಿಕೆ ಹೆಚ್ಚಿಸಲು ಇಪಿಎಫ್‌ಒ ಚಿಂತನೆ ನಡೆಸುತ್ತಿದೆ ಎಂದು ವರದಿ ಯಾಗಿದೆ. ಕಳೆದ ಮಾರ್ಚ್‌ನಲ್ಲಿ ಇಪಿಎಫ್‌ಒ ಟ್ರಸ್ಟಿಗಳ ಮಂಡಳಿಯು ತನ್ನ ಈಕ್ವಿಟಿ ಹೂಡಿಕೆಯ ಮಿತಿಯನ್ನು ಏರಿಸಲು ಅನುಮತಿ ನೀಡಿತ್ತು.
ಹಾಲಿ ನಿಯಮಗಳ ಪ್ರಕಾರ ಇಪಿಎಫ್‌ಒ ಈಕ್ವಿಟಿಗಳಲ್ಲಿ 5%-15% ಶ್ರೇಣಿಯಲ್ಲಿ ಹೂಡಿಕೆ ಮಾಡಬಹುದು. 2023ರ ಜನವರಿ ತನಕ ಇಪಿಎಫ್‌ಒ ಈಕ್ವಿಟಿ ಗಳಲ್ಲಿ 10% ತನಕ ಮಾತ್ರ ಹೂಡಿಕೆ ಮಾಡಿದೆ. ಗರಿಷ್ಠ ಮಿತಿಯಾದ 15% ತನಕ ಈ ವರ್ಷ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವ ನಿರೀಕ್ಷೆ ಇದೆ.
ಇಪಿಎಫ್‌ಒ 2015-16ರಲ್ಲಿ ಈಕ್ವಿಟಿಗಳಲ್ಲಿ 5%, 2016-17ರಲ್ಲಿ 10%, 2017-18ರಲ್ಲಿ 15% ಹೂಡಿಕೆ ಮಾಡಿತ್ತು. ಇಪಿಎಫ್‌ಒ ತನ್ನ ಒಟ್ಟು ಹೂಡಿಕೆಯಲ್ಲಿ 9.24% ಪಾಲನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದೆ.
ಕಳೆದ 2022-23ರಲ್ಲಿ ಇಪಿಎಫ್‌ಒ (EPFO) ಅಡಿಯಲ್ಲಿ ಫಾರ್ಮಲ್ ಸೆಕ್ಟರ್ ವಲಯದ ಉದ್ಯೋಗಿಗಳ ಸಂಖ್ಯೆ 13% ಹೆಚ್ಚಳವಾಗಿದೆ.
2023ರ ಮಾರ್ಚ್‌ನಲ್ಲಿ ಇಪಿಎಫ್‌ಒಗೆ ಸೇರ್ಪಡೆಯಾಗಿರುವ 13.4 ಲಕ್ಷ ಕಾರ್ಮಿಕರ ಪೈಕಿ ಸುಮಾರು 7.5 ಲಕ್ಷ ಮಂದಿ ಹೊಸ ಸದಸ್ಯರಾಗಿದ್ದಾರೆ. 2.3 ಲಕ್ಷ ಮಂದಿ 18-21 ವರ್ಷ ವಯೋಮಿತಿಯವರಾಗಿದ್ದಾರೆ. 1.9 ಲಕ್ಷ ಮಂದಿ 22-25 ವರ್ಷ ವಯೋಮಿತಿಯವರಾಗಿದ್ದಾರೆ.
ಉತ್ತರಾಖಂಡ್, ಉತ್ತರಪ್ರದೇಶ, ಹಿಮಾಚಲಪ್ರದೇಶ, ಜಮ್ಮು ಕಾಶ್ಮೀರ, ಮಿಜೋರಾಂ ಮತ್ತಿತರ ರಾಜ್ಯಗಳಲ್ಲಿ ಇಪಿಎಫ್‌ಒಗೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಅತಿ ಹೆಚ್ಚು ಮಂದಿ ಹೊಸತಾಗಿ ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ.