Thursday, 12th December 2024

S Jaishankar: ಪಾಕಿಸ್ತಾನದೊಂದಿಗೆ ಮಾತುಕತೆ ಮುಗಿದ ಅಧ್ಯಾಯ; ಸಚಿವ ಎಸ್‌. ಜೈಶಂಕರ್‌ ಸ್ಪಷ್ಟನೆ

S Jaishankar

ನವದೆಹಲಿ: ಪಾಕಿಸ್ತಾನ (Pakistan)ದೊಂದಿಗಿನ ಮಾತುಕತೆ ಮುಗಿದ ಅಧ್ಯಾಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ (S Jaishankar) ತಿಳಿಸಿದ್ದಾರೆ. ರಾಯಭಾರಿ ರಾಜೀವ್‌ ಸಿಕ್ರಿ ಅವರ ʼಸ್ಟ್ರಾಟೆಜಿಕ್‌ ಕೌನ್‌ಡ್ರಮ್ಸ್‌: ರಿಶೇಪಿಂಗ್‌ ಇಂಡಿಯಾಸ್‌ ಫಾರಿನ್‌ ಪಾಲಿಸಿʼ (Strategic Conundrums: Reshaping India’s Foreign Policy) ಕೃತಿಯನ್ನು ಬಿಡಿಗಡೆಗೊಳಿಸಿ ಅವರು ನೆರೆರಾಷ್ಟ್ರ ಪಾಕಿಸ್ತಾನದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪಾಕ್‌ನೊಂದಿಗೆ ಇನ್ನು ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಬಗ್ಗೆ ನಿರಂತರವಾಗಿ ಕಠಿಣವಾಗಿ ಮಾತನಾಡುತ್ತಿರುವ ಜೈಶಂಕರ್, “ಮಾತುಕತೆಯಲ್ಲ, ಕೈಗೊಳ್ಳುವ ಕ್ರಮಗಳು ಪರಿಣಾಮಗಳನ್ನು ಹೊಂದಿವೆ” ಎಂದು ಹೇಳಿದ್ದಾರೆ. ʼʼಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ 370ನೇ ವಿಧಿಯನ್ನು ರದ್ದು ಪಡಿಸಿರುವುದು ಉತ್ತಮ ಕಾರ್ಯ ಎಂದು ನಾನು ಭಾವಿಸುತ್ತೇನೆ. ಈಗಿನ ಪ್ರಶ್ನೆ ಎಂದರೆ ನಾವು ಪಾಕಿಸ್ತಾನದೊಂದಿಗೆ ಯಾವ ರೀತಿಯ ಸಂಬಂಧವನ್ನು ಮುಂದುವರಿಸಬೇಕು ಎನ್ನುವುದು. ರಾಜೀವ್‌ ಸಿಕ್ರಿ ತಮ್ಮ ಕೃತಿಯಲ್ಲಿ ಭಾರತ ಪ್ರಸ್ತುತ ಪಾಕಿಸ್ತಾನದ ವಿಚಾರದಲ್ಲಿ ತೆಗೆದುಕೊಂಡಿರುವ ನಿಲುವನ್ನೇ ಮುಂದುವರಿಸಬೇಕು ಎಂದು ಸಲಹೆ ನೀಡಿದ್ದಾರೆ. ನಾನು ಹೇಳಲು ಬಯಸುವುದೇನೆಂದರೆ, ನಾವು ನಿಷ್ಕ್ರಿಯರಲ್ಲ. ಅವರು ಸಕಾರಾತ್ಮಕ ಅಥವಾ ನಕಾರಾತ್ಮಕ ಯಾವುದೇ ನಿರ್ಧಾರ ತೆಗೆದುಕೊಂಡರೂ ಪ್ರತಿಕ್ರಿಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಭಾರತವು ಬಾಂಗ್ಲಾದೇಶದೊಂದಿಗೆ ಪರಸ್ಪರ ಹಿತಾಸಕ್ತಿಯ ನೆಲೆಯನ್ನು ಕಂಡುಕೊಳ್ಳಬೇಕಾಗಿದೆ ಎಂದಿರುವ ಸಚಿವರು ಭಾರತವು ಅಲ್ಲಿನ ಸರ್ಕಾರದೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.  “ಬಾಂಗ್ಲಾದೇಶದ ಸ್ವಾತಂತ್ರ್ಯದ ನಂತರ, ನಮ್ಮ ಸಂಬಂಧವು ಹಲವು ಏರಿಳಿತಗಳನ್ನು ಕಂಡಿದೆʼʼ ಎಂದು ತಿಳಿಸಿದ್ದಾರೆ.

ಕೆಲವು ತಿಂಗಳ ಹಿಂದೆಯಷ್ಟೇ  ಭಯೋತ್ಪಾದನೆ ವಿರುದ್ದ ಕಿಡಿಕಾರಿದ್ದ ಅವರು, ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು. ಭಯೋತ್ಪಾದನೆಯ ವಿಷಯದಲ್ಲಿ ಭಾರತವು ಇನ್ನು ಮುಂದೆ ಯಾರನ್ನು ಬಿಡುವ ಮನಸ್ಥಿತಿಯಲ್ಲಿಲ್ಲ. ಈಗ ಈ ಸಮಸ್ಯೆಯನ್ನು ನಿರ್ಲಕ್ಷಿಸುವುದಿಲ್ಲ ಎಂದು ವಿದೇಶಾಂಗ ಸಚಿವರು ಗುಡುಗಿದ್ದರು.