Saturday, 23rd November 2024

ಪ್ರತ್ಯೇಕ ರೈಲುಗಳಲ್ಲಿ ಬೆಂಕಿ ದುರಂತ: 25 ಪ್ರಯಾಣಿಕರಿಗೆ ಗಾಯ

ಇಟಾವಾ: ಉತ್ತರ ಪ್ರದೇಶ ಇಟಾವಾದಲ್ಲಿ ಗುರುವಾರ ಮುಂಜಾನೆ ದೆಹಲಿ-ಸಹರ್ಸಾ ವೈಶಾಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ವೈಶಾಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಪ್ಯಾಂಟ್ರಿ ಕಾರಿನ ಮುಂದಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆ ಎಸ್6 ಬೋಗಿಯವರೆಗೂ ಆವರಿಸಿ ಅವಾಂತರ ಸೃಷ್ಟಿಸಿತ್ತು. ತಕ್ಷಣ ರೈಲನ್ನು ನಿಲ್ಲಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು.

ಬುಧವಾರ ರಾತ್ರಿ ಉತ್ತರ ಪ್ರದೇಶದ ಸರಾಯ್ ಭೂಪತ್ ರೈಲು ನಿಲ್ದಾಣದ ಬಳಿ ನವದೆಹಲಿ-ದರ್ಬಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಬೋಗಿ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮೂರು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ರೈಲು ಸರಾಯಿ ಭೂಪತ್ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದಾಗ ಸ್ಲೀಪರ್ ಕೋಚ್‌ನಿಂದ ಹೊಗೆ ಬರುತ್ತಿರುವುದನ್ನು ಸ್ಟೇಷನ್ ಮಾಸ್ಟರ್ ಗಮನಿಸಿದ್ದಾರೆ. ಸ್ಟೇಷನ್ ಮಾಸ್ಟರ್ ಲೊಕೊಪೈಲೆಟ್ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿ ರೈಲನ್ನು ನಿಲ್ಲಿಸಿದರು. ಬಳಿಕ ಸ್ಲೀಪರ್ ಕೋಚ್‌ನಿಂದ ಪ್ರಯಾಣಿಕರನ್ನು ಸರುಕ್ಷಿತವಾಗಿ ರಕ್ಷಿಸಿದ್ದು, ಬೆಂಕಿ ಹೊತ್ತಿಕೊಂಡ ತಕ್ಷಣ ಹಲವು ಪ್ರಯಾಣಿಕರು ರೈಲಿನಿಂದ ಜಿಗಿದಿದ್ದಾರೆ.

ಈ ಅವಘಡದಲ್ಲಿ ಸುಟ್ಟು ಕರಕಲಾದ ಮೂರು ಬೋಗಿಗಳು ರೈಲಿನಿಂದ ಬೇರ್ಪಟ್ಟಿವೆ. ಶಾರ್ಟ್ ಸರ್ಕ್ಯೂಟ್ ನಿಂದ ರೈಲಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.