Friday, 22nd November 2024

ಟಿಎಂಸಿ ಮುಖಂಡನ ಮನೆಯಲ್ಲಿ ಇವಿಎಂ, ವಿವಿಪ್ಯಾಟ್ ಪತ್ತೆ, ಅಧಿಕಾರಿ ಅಮಾನತು

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆ ಮಂಗಳವಾರ ನಡೆಯುತ್ತಿದೆ. ಆದರೆ ಸೋಮವಾರ ರಾತ್ರಿ ತೃಣಮೂಲ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ನಾಲ್ಕು ಇವಿಎಂ ಮತಯಂತ್ರಗಳು ಹಾಗೂ ನಾಲ್ಕು ವಿವಿಪ್ಯಾಟ್ ‌ಗಳು ಪತ್ತೆಯಾಗಿವೆ.

ಉಲುಬೆರಿಯಾ ಉತ್ತರ ಕ್ಷೇತ್ರದಲ್ಲಿನ ಟಿಎಂಸಿ ಮುಖಂಡನ ನಿವಾಸದಲ್ಲಿ ಈ ಯಂತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ತುಳಸಿಬೆರಿಯಾದಲ್ಲಿನ ಟಿಎಂಸಿ ಮುಖಂಡ ಗೌತಮ್ ಘೋಷ್ ಅವರ ನಿವಾಸ ದಿಂದ ಈ ಇವಿಎಂ ಯಂತ್ರಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಬಿಜೆಪಿ ಸದಸ್ಯ ಚಿರಾನ್ ಬೇರಾ ಆರೋಪಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋ ಜನೆಗೊಂಡಿದ್ದ ಕಾರಿ ನಲ್ಲೇ ಈ ಯಂತ್ರಗಳನ್ನು ತರಲಾಗಿದೆ. ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರು ಟಿಎಂಸಿ ಮುಖಂಡನ ಮನೆ ಮುಂದೆ ರಾತ್ರಿ ನಿಂತಿತ್ತು ಎಂದು ಆರೋಪಿಸಿದ್ದಾರೆ.

ತಡರಾತ್ರಿಯಾದ್ದರಿಂದ ಚುನಾವಣಾ ಸಿಬ್ಬಂದಿ ಮಲಗಿದ್ದರು. ಮತಗಟ್ಟೆಗಳನ್ನು ತೆರೆಯಲಿಲ್ಲ. ಹಾಗಾಗಿ ಸಂಬಂಧಿ ಮನೆಗೆ ಮಲಗಲು ಬಂದಿದ್ದೆ. ನನ್ನ ಜೊತೆಗೆ ಯಂತ್ರಗಳನ್ನು ಇಲ್ಲಿಟ್ಟಿದ್ದೆ ಎಂದು ವಲಯಾಧಿಕಾರಿ ಉತ್ತರಿಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಟಿಎಂಸಿ ಮುಖಂಡನ ಮನೆಯಲ್ಲಿರಿಸಲಾಗಿದ್ದ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಘಟನೆ ಸಂಬಂಧ ವಲಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಚುನಾವಣಾ ಆಯೋಗದ ಮೂಲದ ಪ್ರಕಾರ, ಮತಗಟ್ಟೆ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದು, ಆದೇಶವು ಸ್ವಲ್ಪ ಸಮಯದಲ್ಲೇ ಬರಲಿದೆ ಎಂದು ತಿಳಿದುಬಂದಿದೆ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily