Friday, 20th September 2024

Tirupati Laddoo Row : ದೇವರ ಹೆಸರಲ್ಲಿ ರಾಜಕೀಯ; ನಾಯ್ಡು ವಿರುದ್ಧ ಟೀಕೆ ಮಾಡಿದ ಜಗನ್‌ ರೆಡ್ಡಿ

Tirupati laddoos row

ನವದೆಹಲಿ: ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ತಯಾರಿಕೆಯಲ್ಲಿ ದನದ ಕೊಬ್ಬು ಸೇರಿದಂತೆ ಕಲಬೆರಕೆ ಪದಾರ್ಥಗಳನ್ನು ಬಳಸಲಾಗುತ್ತಿತ್ತು (Tirupati Laddoo Row) ಎಂಬ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆರೋಪಗಳನ್ನು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆ ಡ್ಡಿ (Jagan Mohan Reddy) ಶುಕ್ರವಾರ ನಿರಾಕರಿಸಿದ್ದಾರೆ ತಮ್ಮ ಸರ್ಕಾರದ ಅಡಿಯಲ್ಲಿ ಯಾವುದೇ ಉಲ್ಲಂಘನೆ ನಡೆದಿಲ್ಲ. ಇದರು ಅನಗತ್ಯ ವಿವಾದ ಹಾಗೂ ದೇವರ ಹೆಸರಲ್ಲಿ ಮಾಡುತ್ತಿರುವ ರಾಜಕೀಯ ಎಂದು ಅವರು ಹೇಳಿಕೊಂಡಿದ್ದಾರೆ.

ನಾಯ್ಡು ಅವರು ದೇವರ ಹೆಸರಿನಲ್ಲಿ ಅನುಕಂಪದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಸಿಎಂ, ಲಡ್ಡುಗಳನ್ನು ತಯಾರಿಸಲು ಬಳಸಲಾಗಿರುವ ತುಪ್ಪವನ್ನು ಎನ್ಎಬಿಎಲ್‌ನಿಂದ (ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಫಾರ್ ಟೆಸ್ಟಿಂಗ್ ಅಂಡ್ ಕ್ಯಾಲಿಬ್ರೇಷನ್ ಲ್ಯಾಬೊರೇಟರೀಸ್) ಪ್ರಮಾಣ ಪತ್ರ ಪಡೆದ ಕಂಪನಿಗಳಿಂದ ಖರೀದಿಸಲಾಗಿದೆ. ನಂತರವೂ ಅದನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ ಎಂದು ಹೇಳಿದರು. ತುಪ್ಪ ಖರೀದಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕತೆಯಿಂದ ಕೂಡಿತ್ತು ಎಂಬುದಾಗಿಯೂ ಅವರು ಹೇಳಿದ್ದಾರೆ.

ನಾಯ್ದು ಅವಧಿಯದ್ದೇ ಲ್ಯಾಬ್ ವರದಿ

ಲ್ಯಾಬ್‌ನಲ್ಲಿ ಕಲಬೆರಕೆ ಇದೆ ಎಂದು ವರದಿ ಬಂದಿರುವುದು ಎನ್ ಚಂದ್ರಬಾಬು ನಾಯ್ಡುಸಿಎಂ ಆಗಿರುವ ಅವಧಿಯದ್ದು. ಅದು ಜುಲೈನಲ್ಲಿ ತಯಾರಿಸಿದ ಲಡ್ಡಿನ ವರದಿಯಾಗಿದೆ. ಹೀಗಾಗಿ ಘಟನೆಗೆ ಅವರೇ ಹೊಣೆ ಎಂದು ಹೇಳಿದರು.

ತುಪ್ಪದ ಗುಣಮಟ್ಟ ಕಳಪೆಯಾಗಿದೆ ಎಂದು ನಮಗೆ ತಿಳಿದಿತ್ತು. ತಕ್ಷಣವೇ ಆಗಿನ ಮುಖ್ಯಮಂತ್ರಿ ನಾಯ್ಡು ಅವರಿಗೆ ಮಾಹಿತಿ ನೀಡಿದ್ದೆವು. ಆ ಸಮಯದಲ್ಲಿ ಪೂರೈಕೆದಾರರಾಗಿದ್ದ ಎಆರ್ ಡೈರಿ ಕಳಪೆ ಗುಣಮಟ್ಟದ ತುಪ್ಪ ಒದಗಿಸಿತ್ತು ಎಂದು ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: Tirupati Laddoo: ತಿರುಪತಿ ಲಡ್ಡು ಪ್ರಸಾದ ವಿವಾದ; ವರದಿ ಕೇಳಿದ ಕೇಂದ್ರ ಸರ್ಕಾರ

ಈ ಲ್ಯಾಬ್ ಪರೀಕ್ಷೆಗಳಲ್ಲದೆ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತುಪ್ಪದ ಗುಣಮಟ್ಟವನ್ನು ಪರೀಕ್ಷಿಸಲು ಮೂರು ಬಾರಿ ತನ್ನದೇ ಆದ ಪರೀಕ್ಷೆಗಳನ್ನು ನಡೆಸುತ್ತದೆ. ಈ ಪ್ರಕ್ರಿಯೆಯನ್ನು ಹಲವು ವರ್ಷಗಳಿಂದ ಅನುಸರಿಸಲಾಗುತ್ತಿದೆ. ನಾಯ್ಡು ಅವರು ರಾಜಕೀಯ ಲಾಭಕ್ಕಾಗಿ ದೇವರನ್ನು ಬಳಸುತ್ತಿದ್ದಾರೆ ಮತ್ತು ವೆಂಕಟೇಶ್ವರ ಸ್ವಾಮಿಯನ್ನು ಅವಮಾನಿಸಿದ್ದಾರೆ ಎಂದು ರೆಡ್ಡಿ ಆರೋಪಿಸಿದರು.

ಆಂಧ್ರಪ್ರದೇಶದಲ್ಲಿ ತಮ್ಮ 100 ದಿನಗಳ ಆಡಳಿತದ ವೈಫಲ್ಯವನ್ನು ಬೇರೆಡೆಗೆ ಸೆಳೆಯಲು ತಿರುಪತಿ ಪ್ರಸಾದಂ ಲಡ್ಡುಗಳಲ್ಲಿ ತುಪ್ಪದ ಕಲಬೆರಕೆ ಮಾಡಲಾಗಿದೆ ಎಂದು ನಾಯ್ಡು ಆರೋಪಿಸಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ.