Saturday, 23rd November 2024

ನಾಳೆಯಿಂದ ಸಚಿವ ಎಸ್‌.ಜೈಶಂಕರ್‌ ವಿದೇಶ ಪ್ರವಾಸ ಆರಂಭ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರು ಅ.10ರಿಂದ 13 ರವರೆಗೆ ನಾಲ್ಕು ದಿನ ಕಾಲ ಕಿರ್ಗಿಸ್ತಾನ, ಕಜಕಿಸ್ತಾನ ಮತ್ತು ಅರ್ಮೇನಿಯಾ ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಈ ವೇಳೆ ರಾಷ್ಡ್ರಗಳ ನಡುವೆ ದ್ವಿಪಕ್ಷೀಯ ಸಂಬಂಧ ವೃದ್ಧಿಸುವ ಮತ್ತು ಅಫ್ಗಾನಿಸ್ತಾನದ ಬೆಳವಣಿಗೆಗಳು ಸೇರಿದಂತೆ ಪ್ರಮುಖ ಪ್ರಾದೇಶಿಕ ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ.

ಈ ಭೇಟಿಯು ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಪ್ರಗತಿಯನ್ನು ಪರಿಶೀಲಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಹೇಳಿದೆ. ಜೈಶಂಕರ್‌ ಅವರು ಅಫ್ಗಾನಿಸ್ತಾನದ ಬೆಳವಣಿಗೆಗಳ ಕುರಿತು ಪ್ರಮುಖವಾಗಿ ಚರ್ಚಿಸುವ ನಿರೀಕ್ಷೆ ಇದೆ ಎಂದೂ ಅದು ಹೇಳಿದೆ.

ಜೈಶಂಕರ್‌ ಮೊದಲಿಗೆ ಕಿರ್ಗಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸ ಲಿದ್ದಾರೆ. ಈ ಸಮಯದಲ್ಲಿ ಕೆಲವು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಜೈಶಂಕರ್‌ ಅವರು ವಿದೇಶಾಂಗ ಸಚಿವರಾದ ಮೇಲೆ ಕಿರ್ಗಿಸ್ತಾನಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.

ಅಕ್ಟೋಬರ್‌ 11 ರಿಂದ 12ರವರೆಗೆ ಜೈಶಂಕರ್‌ ಅವರು ಕಜಕಿಸ್ತಾನದಲ್ಲಿ ಏಷ್ಯಾದಲ್ಲಿ ಸಂವಹನ ಮತ್ತು ಆತ್ಮ ವಿಶ್ವಾಸ ನಿರ್ಮಾಣ ಕ್ರಮಗಳ ಸಮ್ಮೇಳನದ 6ನೇ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅ.12 ರಿಂದ 13ರವರೆಗೆ ಸಚಿವರು ಅರ್ಮೇನಿಯಾ ದೇಶಕ್ಕೆ ಭೇಟಿ ನೀಡಲಿದ್ದಾರೆ.