ನವದೆಹಲಿ: ಬಹುನಿರೀಕ್ಷಿತ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳಲ್ಲಿ (Exit poll results 2024) ಬಿಜಿಪಿ ಮೈತ್ರಿಕೂಟದ ಪಕ್ಷಗಳು ಜಯ ಸಾಧಿಸಲಿವೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಪಡಿಸಿವೆ. ಆ ಮೂಲಕ ಮತ್ತೊಮ್ಮೆ ಮಹಾಯುತಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಲಿದ್ದು, ಜಾರ್ಖಂಡ್‌ನಲ್ಲಿಯೂ ಬಿಜೆಪಿ ಸಾರಥ್ಯದ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದರೆ, ಈ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ನವೆಂಬರ್ 23 ರಂದು ಹೊರಬೀಳಲಿದೆ.
ನೆವಂಬರ್ 20 ರಂದು ಬುಧವಾರ ಮಹಾರಾಷ್ಟ್ರದಲ್ಲಿ ಏಕೈಕ ಹಂತದಲ್ಲಿ ಒಟ್ಟು 288 ವಿಧಾನ ಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ಮುಂಜಾನೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಗೆ ಅಂತ್ಯವಾಗಿತ್ತು. ಬಿಜೆಪಿ (140 ಸ್ಥಾನಗಳು), ಶಿವಸೇನೆ ( 81 ಸ್ಥಾನಗಳು) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ- 59 ಸ್ಥಾನಗಳು) ಒಳಗೊಂಡ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಮತ್ತು ಕಾಂಗ್ರೆಸ್ (101 ಸ್ಥಾನಗಳು), ಶಿವಸೇನೆ (ಯುಬಿಟಿ-95ಸ್ಥಾನಗಳು) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ-86 ಸ್ಥಾನಗಳು) ಒಳಗೊಂಡ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಇದರ ಜೊತೆಗೆ ಮಹಾರಾಷ್ಟ್ರದಲ್ಲಿ ಬಿಎಸ್‌ಪಿ ಪಕ್ಷದಿಂದ ಒಟ್ಟು 238 ಅಭ್ಯರ್ಥಿಗಳನ್ನು ಸ್ಪರ್ಧೆ ಮಾಡಿದ್ದರೆ, ಎಐಎಂಐಎಂನ 17 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ದಿಸಿದ್ದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯ: ಮ್ಯಾಟ್ರಿಜ್ ಸಮೀಕ್ಷೆ
ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ಮ್ಯಾಟ್ರಿಜ್ ಸಂಸ್ಥೆಯು ಚುನಾವಾಣೋತ್ತರ ಸಮೀಕ್ಷೆಯನ್ನು ನಡೆಸಿದ್ದು, ಬಿಜೆಪಿ, ಶಿವಸೇನೆ ಹಾಗೂ ಎನ್‌ಸಿಪಿ ಒಳಗೊಂಡ ಮಹಾಯುತಿಗೆ ಮೈತ್ರಿಕೋಟ ಜಯ ಸಾಧಿಸಲಿದೆ ಎಂದು ತಿಳಿಸಿದೆ. ಮಹಾಯುತಿ ಮೈತ್ರಿಕೋಟವು ಮಹಾರಾಷ್ಟ್ರದಲ್ಲಿನ ಒಟ್ಟು 288 ವಿಧಾನ ಸಭಾ ಕ್ಷೇತ್ರಗಳ ಪೈಕಿ 150 ರಿಂದ 170 ವಿಧಾನ ಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಮ್ಯಾಟ್ರಿಕ್ ಸಮೀಕ್ಷೆ ತಿಳಿಸಿದೆ. ಆ ಮೂಲಕ ಬಿಜೆಪಿ ಒಳಗೊಂಡ ಮೈತ್ರಿಕೂಟ ಮತ್ತೊಮ್ಮೆ ಮಹಾರಾಷ್ಟ್ರದಲ್ಲಿ ಸರಳ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದು ಹೇಳಿದೆ.
ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿಗೆ ವಿರೋಧ ಪಕ್ಷ?
ಇನ್ನು ಮಹಾಯುತಿ ಮೈತ್ರಿಕೋಟದ ಎದುರಾಳಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಮಹಾರಾಷ್ಟ್ರದಲ್ಲಿ 110 ರಿಂದ 130 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆ ಮೂಲಕ ಮತ್ತೊಮ್ಮೆ ಮಹಾ ವಿಕಾಸ್ ಅಘಾಡಿ ಮತ್ತೊಮ್ಮೆ ವಿರೋಧ ಪಕ್ಷವಾಗಿ ಹೊರಹೊಮ್ಮಲಿದೆ. ಇನ್ನು ಇತರೆ ಪಕ್ಷಗಳು 8 ರಿಂದ 10 ಸ್ಥಾನಗಳಲ್ಲಿ ಗೆಲುವು ಪಡೆಯಲಿವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಜಾರ್ಖಂಡ್‌ನಲ್ಲಿಯೂ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಹುಮತ
ಜಾರ್ಖಂಡ್‌ನಲ್ಲಿ ಬಿಜೆಪಿ ಸಾರಥ್ಯದ ಎನ್‌ಡಿಎ ಮೈತ್ರಿಕೂಟ ಬಹುಮತದೊಂದಿಗೆ ಅಧಿಕಾರವನ್ನು ವಹಿಸಿಕೊಳ್ಳಲಿದೆ ಎಂದು ಪೀಪಲ್ ಪಲ್ಸ್‌ನ ಚುನಾವಣೋತ್ತರ ಸಮೀಕ್ಷೆಯು ತಿಳಿಸಿದೆ. ಜಾರ್ಖಂಡ್‌ನಲ್ಲಿ ಬಹುಮತ ಸಾಧಿಸಲು 41 ಸ್ಥಾನಗಳಲ್ಲಿ ಗೆಲುವು ಅಗತ್ಯವಿದೆ. ಅದರಂತೆ ಎನ್‌ಡಿಎ ಚುನಾವಣೆಯಲ್ಲಿ 42 ರಿಂದ 48 ಸ್ಥಾನಗಳನ್ನು ಗೆಲ್ಲಲಿದೆ ಎಂದು ಪೀಪಲ್ಸ್ ಪಲ್ಸ್ ಸಮೀಕ್ಷೆ ತಿಳಿಸಿದೆ. ಇನ್ನು ವಿರೋಧ ಪಕ್ಷವಾದ ಜೆಎಂಎಂ ಸಾರಥ್ಯದ ಇಂಡಿಯಾ ಮೈತ್ರಿಕೂಟವು 16 ರಿಂದ18 ಸ್ಥಾನಗಳಲ್ಲಿ ಗೆಲುವು ಪಡೆಯಲಿದೆ ಎಂದು ತಿಳಿಸಿದೆ. ಕಾಂಗ್ರೆಸ್ ಪಕ್ಷ 8 ರಿಂದ 14 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದೆಂದು ಹೇಳಿದೆ.