Thursday, 12th December 2024

ವಿಧಾನಸಭೆ ಕಲಾಪದ ಫೇಸ್‌ಬುಕ್‌ ಲೈವ್‌: ಶಾಸಕ ಅಮಾನತು

ಖನೌ: ಉತ್ತರ ಪ್ರದೇಶ ವಿಧಾನಸಭೆಯ ಕಲಾಪದ ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ ಸಮಾಜವಾದಿ ಪಕ್ಷದ ಸದಸ್ಯನನ್ನು ಸ್ಪೀಕರ್‌ ಅಮಾನತು ಮಾಡಿದ್ದಾರೆ. ಅತುಲ್‌ ಪ್ರಧಾನ್‌ ಫೇಸ್‌ಬುಕ್‌ ಲೈವ್‌ ಮಾಡಿ ಅಮಾನತಾದ ಶಾಸಕ.

ಕಲಾಪ ನಡೆಯುತ್ತಿದ್ದ ವೇಳೆ ಸಮಾಜವಾದಿ ಪಕ್ಷದ ಸದಸ್ಯರು, ರಾಮ್‌ಪುರ ಉಪ ಚುನಾವಣೆ ಸಂಬಂಧ ಆಡಳಿತ ಪಕ್ಷದ ನಡವಳಿಕೆ ವಿರೋಧಿಸಿ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಅತುಲ್‌ ಪ್ರಧಾನ್‌ ಅವರು ಫೇಸ್‌ಬುಕ್‌ನಲ್ಲಿ ಪ್ರತಿಭಟನೆಯನ್ನು ನೇರ ಪ್ರಸಾರ ಮಾಡಿದ್ದಾರೆ.

ಇದು ವಿಧಾನಸಭಾಧ್ಯಕ್ಷರ ಗಮನಕ್ಕೆ ಬಂದಿದ್ದು, ಅತುಲ್‌ ಅವರನ್ನು ವಿಧಾನಸಭೆ ಯಿಂದ ಅಮಾನತು ಮಾಡಿದ್ದಾರೆ.

ಬಳಿಕ ಅವರು ಹೊಸ ಸದಸ್ಯರೆಂದೂ, ಅವರಿಗೆ ನಿಯಮಾವಳಿಗಳ ಅರಿವಿಲ್ಲವೆಂದೂ ಎಸ್‌ಪಿ ಸದಸ್ಯರು ಸ್ಪೀಕರ್‌ಗೆ ಮನವರಿಕೆ ಮಾಡಿ ಅಮಾನತು ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.

‘ನಿಯಮಾವಳಿಗಳು ಗೊತ್ತಿಲ್ಲದೇ ಇರುವುದು ಒಪ್ಪುವಂಥದಲ್ಲ’ ಎಂದು ಹೇಳಿದ ಸ್ಪೀಕರ್‌, ಅವರನ್ನು ಮತ್ತೆ ಸದನಕ್ಕೆ ಕರೆಸಿಕೊಳ್ಳಲು ನಿರಾಕರಿಸಿದರು. ಬಳಿಕ 1 ಗಂಟೆಯ ನಂತರ ಸದನಕ್ಕೆ ಹಾಜರಾಗಲು ಅತುಲ್‌ ಅವರಿಗೆ ಸ್ಪೀಕರ್ ಅನುಮತಿ ನೀಡಿದರು.