ವಾರಣಾಸಿ: ಹುಸಿ ಬಾಂಬ್ ಬೆದರಿಕೆಯಿಂದ ವಿಮಾನ ತುರ್ತಾಗಿ ಬೇರೆ ರನ್ವೇ ಅಲ್ಲಿ ಲ್ಯಾಂಡ್ ಆಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮುಂಬೈನಿಂದ ವಾರಣಾಸಿಗೆ ಹೊರಟಿದ್ದ ಆಕಾಶ ಏರ್ಲೈನ್ಸ್ ವಿಮಾನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಬಾಂಬ್ ಬೆದರಿಕೆಯ ಸಂದೇಶ ಬಂದಿತ್ತು. ತಕ್ಷಣವೇ ಏರ್ ಟ್ರಾಫಿಕ್ ಕಂಟ್ರೋಲ್ ಬಾಂಬ್ ಬೆದರಿಕೆಯ ಬಗ್ಗೆ ವಿಮಾನದ ಕ್ಯಾಪ್ಟನ್ಗೆ ಮಾಹಿತಿ ನೀಡಿ, ಬಳಿಕ ಸಾಧ್ಯವಿರುವ ಎಲ್ಲಾ ತುರ್ತು ಕ್ರಮಗಳನ್ನು ಕೈಗೊಂಡು ವಿಮಾನವನ್ನು ವಾರಣಾಸಿಯಲ್ಲಿ ಪ್ರತ್ಯೇಕ ರನ್ವೇಯಲ್ಲಿ ಇಳಿಸಲಾಯಿತು.
ಜತೆಗೆ ಕೂಡಲೇ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಯಿತು. ಸಿಐಎಸ್ಎಫ್ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ವಿಮಾನದಲ್ಲಿ ತೀವ್ರ ಶೋಧ ನಡೆಸಿದರು. ಆದರೆ ತಪಾಸಣೆ ವೇಳೆ ಏನೂ ಪತ್ತೆಯಾಗಿಲ್ಲ.
ಈ ಕುರಿತು ವಾರಣಾಸಿ ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ಮಾತನಾಡಿ “ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಬಾಂಬ್ ಬಗ್ಗೆ ಮಾಹಿತಿ ಸಿಕ್ಕಾಗ ವಿಮಾನ ನಿಲ್ದಾಣ ಪ್ರಾಧಿಕಾರ ಸಂಪೂರ್ಣ ಮುಂಜಾಗ್ರತೆ ವಹಿಸಿ ಪರಿಶೀಲನೆ ನಡೆಸಿದ್ದು, ಎಲ್ಲವೂ ಯಥಾಸ್ಥಿತಿಯಲ್ಲಿತ್ತು. ಈ ವಿಮಾನ ವಾರಣಾಸಿಗೆ ಮಾತ್ರ ಬರುತ್ತಿದ್ದು, ಇಲ್ಲಿಯೇ ಇಳಿಯಬೇಕಿತ್ತು. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತ್ಯೇಕ ರನ್ವೇಯಲ್ಲಿ ಇಳಿಸಲಾಯಿತು” ಎಂದಿದ್ದಾರೆ.
ವಾರಣಾಸಿಯ ಬನಾರಸ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉಡಾಯಿಸುವುದಾಗಿ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಹಾಕಿದ್ದನು. ಬಾಂಬ್ ಬೆದರಿಕೆ ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಮತ್ತು ಸ್ಥಳೀಯ ಗುಪ್ತಚರ ಇಲಾಖೆ ಬಿಗಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿತ್ತು.